ಆತಿಥೇಯ ನ್ಯೂಜಿಲೆಂಡ್ ಎದುರು 3 ರನ್ ಗಳ ರೋಚಕ ಜಯ ಸಾಧಿಸಿದ ವಿಂಡೀಸ್

ಕ್ರೀಡೆ

ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಎದುರು ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ ತಂಡವು 3 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಸ್ಟೆಫಾನೆ ಟೇಲರ್ ನೇತೃತ್ವದ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್‌ ತಂಡವು 2022ನೇ ಸಾಲಿನ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ವೆಸ್ಟ್ ಇಂಡೀಸ್ ನೀಡಿದ್ದ 260 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಮಹಿಳಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು.

ಪಂದ್ಯದ 4ನೇ ಓವರ್‌ನಲ್ಲೇ ಆರಂಭಿಕ ಬ್ಯಾಟರ್ ಸುಜಿ ಬೇಟ್ಸ್‌ ಕೇವಲ 3 ರನ್‌ ಬಾರಿಸಿ ರನೌಟ್ ಆದರು. ಇನ್ನು ಅಮೆಲಿಯಾ ಕೆರ್ರ್ ಬ್ಯಾಟಿಂಗ್ ಕೇವಲ 13 ರನ್‌ಗಳಿಗೆ ಸೀಮಿತವಾಯಿತು. ಇದಾದ ಬಳಿಕ ಮೂರನೇ ವಿಕೆಟ್‌ಗೆ ನಾಯಕಿ ಸೋಫಿಯಾ ಡಿವೈನ್ ಹಾಗೂ ಆಮಿ ಸೆಟ್ಟರ್ವೈಟ್ 76 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿ ಬೇರ್ಪಡುತ್ತಿದ್ದಂತೆಯೇ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡವು ಗೆಲ್ಲಲು 6 ಎಸೆತಗಳಲ್ಲಿ ಕೇವಲ 6 ರನ್‌ಗಳ ಅಗತ್ಯವಿತ್ತು.

 

ಈ ವೇಳೆ ದಾಳಿಗಿಳಿದ ದೀಂದ್ರಾ ದೋಟ್ಟಿನ್‌ ಕೇವಲ 2 ರನ್ ನೀಡಿ ಒಂದು ರನೌಟ್ ಸಹಿತ 3 ವಿಕೆಟ್ ಪಡೆಯುವ ಮೂಲಕ ತಂಡ ಗೆಲುವಿನ ಕೇಕೆ ಹಾಕುವಂತೆ ಮಾಡಿದರು. ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ವೆಸ್ಟ್ ಇಂಡೀಸ್ ತಂಡದ ಆರಂಭ ಕೂಡಾ ಅಷ್ಟೇನೂ ಉತ್ತಮವಾಗಿರಲಿಲ್ಲ. ವಿಂಡೀಸ್ 39 ರನ್‌ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ ಆರಂಭಿಕ ಬ್ಯಾಟರ್ ಹೇಲಿ ಮ್ಯಾಥ್ಯೂಸ್ ಆಕರ್ಷಕ ಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮ್ಯಾಥ್ಯೂಸ್ 128 ಎಸೆತಗಳನ್ನು ಎದುರಿಸಿ 16 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಮನಮೋಹಕ 119 ರನ್ ಚಚ್ಚದರು.

ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಟೇಲರ್(30) ಚೇದನ್ ನೇಷನ್(36) ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಬ್ಯಾಟಿಂಗ್‌ನಲ್ಲಿ ಶತಕ ಚಚ್ಚಿ ಆಸರೆಯಾಗಿದ್ದ ಹೇಲಿ ಮ್ಯಾಥ್ಯೂಸ್, ಬೌಲಿಂಗ್‌ನಲ್ಲೂ ಸಹಾ 2 ವಿಕೆಟ್‌ ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಹೀಗಾಗಿ ಹೇಲಿ ಮ್ಯಾಥ್ಯೂಸ್ ಉದ್ಘಾಟನಾ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Leave a Reply

Your email address will not be published. Required fields are marked *