ಜಕಾರ್ತ: ಫಿಶ್ ತಿನ್ನೋದು ಅಂದರೆ ಅದೆಷ್ಟೋ ಮಂದಿಗೆ ಇಷ್ಟ. ಆದರೆ ಇಲ್ಲೊಬ್ಬ ಮಹಿಳೆ ಫಿಶ್ ಸೇವಿಸಿಯೇ ಮೃತಪಟ್ಟಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
‘ಪಫರ್’ ಹೆಸರಿನ ಡೆಡ್ಲಿ ಮೀನನ್ನು ಸೇವಿಸಿ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಕೋಮಾ ಸ್ಥಿತಿ ತಲುಪಿದ್ದಾರೆ. ಮಲೇಷ್ಯಾದ ಜೊಹೋರ್ ನಿವಾಸಿ ಲಿಮ್ ಸಿವ್ ಗುವಾನ್ (83) ಎಂಬ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಕೋಮಾ ಸ್ಥಿತಿಯಲ್ಲಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರು ಸ್ಥಳೀಯ ಅಂಗಡಿಯಲ್ಲಿ ಪಫರ್ ಎಂಬ ಹೆಸರಿನ ಮೀನನ್ನು ಖರೀದಿಸಿ ಅಡುಗೆ ಮಾಡಿ ತಿಂದಿದ್ದರು. ಆದರೆ ಮೀನು ಸೇವಿಸಿ ಕೆಲ ಘಂಟೆಗಳಲ್ಲೇ ಮಹಿಳೆ ಮೃತಪಟ್ಟಿದ್ದು ಪತಿ ಗಂಭೀರವಾಗಿ ಆಸ್ಪತ್ರೆ ಸೇರಿದ್ದಾರೆ. ನನ್ನ ತಂದೆ-ತಾಯಿ ಹಲವು ವರ್ಷಗಳಿಂದ ಅದೇ ಮೀನು ವ್ಯಾಪಾರಿಯಿಂದ ಮೀನು ಖರೀದಿಸುತ್ತಿದ್ದಾರೆ. ಆದ್ದರಿಂದ ನನ್ನ ತಂದೆ ಆ ಮೀನಿನ ಬಗ್ಗೆ ಅಷ್ಟೇನು ಯೋಚಿಸಲಿಲ್ಲ ಎಂದು ಲಿಮ್ ದಂಪತಿ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
ಜೋಹೋರ್ನ ಆರೋಗ್ಯ ಮತ್ತು ಏಕತಾ ಸಮಿತಿಯ ಅಧ್ಯಕ್ಷ ಲಿಂಗ್ ಟಿಯಾನ್ ಸೂನ್ ಪ್ರತಿಕ್ರಿಯಿಸಿ, ದಂಪತಿ ಮೀನು ಬಳಸಿ ಅಡುಗೆ ಮಾಡಿ ಸೇವಿಸಿದ್ದರು. ಈ ವೇಳೆ ಮಹಿಳೆಯು ನಡುಕ ಹಾಗೂ ಉಸಿರಾಟದ ತೊಂದರೆ ಅನುಭವಿಸಿದ್ದಾರೆ. ಆಕೆಯ ಪತಿ ಕೂಡ ಒಂದು ಗಂಟೆಯ ನಂತರ ಇದೇ ರೀತಿಯ ರೋಗಲಕ್ಷಣಗಳಿಂದ ಬಳಲಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಷ್ಟರಲ್ಲಿ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಜಪಾನಿನ ಜನಪ್ರಿಯ ಆಹಾರವಾದ ಪಫರ್ ಮೀನಿನಲ್ಲಿ ಮಾರಣಾಂತಿಕ ವಿಷಕಾರಿ ಟೆಟ್ರೋಡೋಟಾಕ್ಸಿನ್ ಮತ್ತು ಸ್ಯಾಕ್ಸಿಟಾಕ್ಸಿನ್ ಅಂಶ ಇದೆ. ಈ ಅಂಶವನ್ನು ಅಡುಗೆ ಅಥವಾ ಘನೀಕರಿಸುವ ಮೂಲಕ ನಾಶಪಡಿಸಲಾಗುವುದಿಲ್ಲ. ಮೀನಿನಿಂದ ಈ ವಿಷವನ್ನು ಹೇಗೆ ತೆಗೆದುಹಾಕಬೇಕು ಎಂಬ ಬಗ್ಗೆ ತರಬೇತಿ ಪಡೆದಿರುವ ಅರ್ಹ ಬಾಣಸಿಗರಿಗೆ ಮಾತ್ರ ಮೀನು ಆಹಾರ ತಯಾರಿಸಲು ಅನುಮತಿ ನೀಡಲಾಗಿದೆ ಎಂದು ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಮಾಹಿತಿ ನೀಡಿದೆ.