ದಲ್ಲಾಸ್: ಅಮೆರಿಕಾದ ದಲ್ಲಾಸ್ ನಲ್ಲಿ ಶನಿವಾರ ಬಂದೂಕು ದಾರಿಯೋರ್ವ ನಡೆಸಿದ ಶೂಟೌಟ್ ನಲ್ಲಿ ಹೈದ್ರಾಬಾದ್ ಮೂಲದ ಮಹಿಳೆ ಸೇರಿದಂತೆ 9 ಮಂದಿ ಹತ್ಯೆಯಾಗಿದ್ದಾರೆ.
ಘಟನೆಯಲ್ಲಿ ಹತ್ಯೆಗೀಡಾದ ಒಂಬತ್ತು ಜನರ ಪೈಕಿ ಭಾರತೀಯ ಮೂಲದ ಇಂಜಿನಿಯರ್ ಐಶ್ವರ್ಯಾ ತಾಟಿಕೊಂಡ ಕೂಡ ಒಬ್ಬರಾಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಖಾಸಗಿ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ಐಶ್ವರ್ಯಾ ತಾಟಿಕೊಂಡ ಹೈದರಾಬಾದ್ ನ ಸರೂರ್ನಗರ ನಿವಾಸಿಯಾಗಿದ್ದು, ಭಾರತದಿಂದ ಅಮೆರಿಕಕ್ಕೆ ತೆರಳಿದ್ದರು.
27 ವರ್ಷದ ತಾಟಿಕೊಂಡ ದಲ್ಲಾಸ್ ಹೊರವಲಯ ಅಲ್ಲೆನ್ ಪ್ರೀಮಿಯಂನ ಮಳಿಗೆಯೊಂದರಲ್ಲಿ ಶಾಫಿಂಗ್ ಮಾಡುತ್ತಿದ್ದಾಗ ಬಂದೂಕುದಾರಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಹಂತಕನನ್ನು ಮಾರಿಸಿಯೊ ಗಾರ್ಸಿಯಾ ಎಂದು ಗುರುತಿಸಲಾಗಿದ್ದು, ಘಟನೆಯ ಬಳಿಕ ಪೊಲೀಸ್ ಅಧಿಕಾರಿ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಲ್ಲಾಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಐಶ್ವರ್ಯಾ ತಾಟಿಕೊಂಡ ಮಾಲ್ ವೊಂದರಲ್ಲಿ ಸ್ನೇಹಿತೆಯೊಂದಿಗೆ ಶಾಫಿಂಗ್ ಮಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಆಕೆಯ ಸ್ನೇಹಿತೆ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.