ಬೆಂಗಳೂರು ;- ಚಾತುರ್ವರ್ಣ ವ್ಯವಸ್ಥೆ ಮಹಿಳೆ ಮತ್ತು ಶೂದ್ರರನ್ನು ಶಿಕ್ಷಣ ವಂಚಿತರನ್ನಾಗಿಸಿತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಚನ ಪಿತಾಮಹ ಫ.ಗು. ಹಳಕಟ್ಟಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಚಾತುರ್ವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಮತ್ತು ಶೂದ್ರರಿಗೆ ಶಿಕ್ಷಣ ಭಾಗ್ಯವನ್ನು ಕಲ್ಪಿಸಿ ಕ್ರಾಂತಿ ಮಾಡಿದವರು ವಚನಕಾರರು ಮತ್ತು ಬಸವಣ್ಣನವರು’ ಎಂದರು.
ಅತ್ಯಂತ ಕೆಳಜಾತಿಯಲ್ಲಿ ಜನಿಸಿ ಅತ್ಯುನ್ನತ ಎತ್ತರಕ್ಕೆ ಏರಿದ ಅಲ್ಲಮಪ್ರಭುರನ್ನು ಅನುಭವ ಮಂಟಪದ ಮುಖ್ಯಸ್ಥರನ್ನಾಗಿಸಿದ್ದರು. ಈ ಅನುಭವ ಮಂಟಪದ ಆಶಯವನ್ನು, ವಚನಗಳ ಮಹತ್ವವನ್ನು ಮುಂದಿನ ತಲೆಮಾರುಗಳಿಗೆ ದಾಟಿಸಿದವರಲ್ಲಿ ಫ.ಗು.ಹಳಕಟ್ಟಿ ಪ್ರಮುಖರು ಎಂದು ಸ್ಮರಿಸಿದರು.
ಚಾತುವರ್ಣ ವ್ಯವಸ್ಥೆ ಕಾರಣಕ್ಕೆ ಶಿಕ್ಷಣದಿಂದ, ಸಂಪತ್ತಿನಿಂದ ಶೂದ್ರ ಸಮುದಾಯ ವಂಚಿತವಾಗಿತ್ತು. ಅದಕ್ಕೇ ಕಾಯಕ ಮತ್ತು ದಾಸೋಹ ಸಂಸ್ಕಾರದ ಮೂಲಕ ಸರ್ವರಿಗೂ ಶಿಕ್ಷಣ ಮತ್ತು ಅವಕಾಶಗಳಲ್ಲಿ ಸಮಪಾಲು ಸಿಗುವಂತೆ ಮಾಡಿದ್ದು ಬಸವಣ್ಣನವರು. ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಇದೇ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಪಾಲಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.