ಗದಗ: ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆಯ್ತು, ಈಗ ಮದ್ಯ ತರಲು ಅವಕಾಶ ಕೊಡಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು..! ಹೌದು ಕಾಂಗ್ರೆಸ್ ಸರ್ಕಾರ ಆರಂಭಿಸಿದ ಸರ್ಕಾರಿ ಬಸ್ನಲ್ಲಿ ಮಹಿಳೆಯರ ಉಚಿತ ಪ್ರಯಾಣದ (Free Bus service) ಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರು (Woman Passengers) ಮತ್ತು ಕಂಡಕ್ಟರ್ ನಡುವೆ ಜಗಳ ಎನ್ನುವುದು ನಿತ್ಯಕಥೆಯಾಗಿದೆ. ಈ ನಡುವೆ ಗದಗದಲ್ಲಿ ಇನ್ನೊಂದು ಕಿರಿಕ್ ನಡೆದಿದೆ. ಅದೇನೆಂದರೆ ಬಸ್ಸಿನಲ್ಲಿ ಮದ್ಯ ಸಾಗಿಸಲು ತಮಗೆ ಅವಕಾಶ ಕೊಡಬೇಕು ಎಂದು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ!
ಇಬ್ಬರು ಮಹಿಳೆಯರು ಬಸ್ಸಿನಲ್ಲಿ ಮದ್ಯದ ಬಾಟಲ್ ಕೊಂಡೊಯ್ಯುತ್ತಿದ್ದುದನ್ನು ಕಂಡಕ್ಟರ್ ಆಕ್ಷೇಪಿಸಿ ಅವರನ್ನು ಬಸ್ಸಿನಿಂದ ಇಳಿದ ಬಳಿಕ ಹೈಡ್ರಾಮಾ ಸೃಷ್ಟಿಯಾಗಿದ್ದು, ಬಸ್ ನಿರ್ವಾಹಕನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆಯರು ಸರ್ಕಾರದ ಉಚಿತ ಯೋಜನೆಯಡಿ ಪ್ರಯಾಣ ಮಾಡುತ್ತಿದ್ದರು ಎನ್ನುವುದು ಚರ್ಚೆಗೆ ಮತ್ತೊಂದು ಆಯಾಮ ಒದಗಿಸಿದೆ. ಗದಗ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಹೈಡ್ರಾಮಾ ನಡೆದಿದ್ದು, ತಮಗೆ ಬಸ್ಸಿನಲ್ಲಿ ಮದ್ಯ ಕೊಂಡೊಯ್ಯಲು ಅವಕಾಶ ಕೊಡಿ ಎಂದು ಆಗ್ರಹಿಸಿದ್ದಾರೆ.