ಸೌತ್ ಆಫ್ರಿಕಾದ ಕೇಪ್ಟೌನ್ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 5 ರನ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಮಹಿಳಾ ಟಿ20 ವಿಶ್ವಕಪ್ ಫೈನಲ್ಗೆ ಪ್ರವೇಶಿಸಿದೆ.
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಆಸೀಸ್ ತಂಡಕ್ಕೆ ಅಲಿಸಾ ಹೀಲಿ (25) ಹಾಗೂ ಬೆತ್ ಮೂನಿ (54) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಗ್ ಲನ್ನಿಂಗ್ 34 ಎಸೆತಗಳಲ್ಲಿ ಅಜೇಯ 49 ರನ್ ಬಾರಿಸಿದರು.
ಹಾಗೆಯೇ ಕೇವಲ 18 ಎಸೆತಗಳಲ್ಲಿ 31 ರನ್ ಬಾರಿಸುವ ಮೂಲಕ ಗಾರ್ಡನರ್ ಅಬ್ಬರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಆಸ್ಟ್ರೇಲಿಯಾ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 172 ಕ್ಕೆ ಬಂದು ನಿಂತಿತು.
ಈ 173 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (9) ಹಾಗೂ ಸ್ಮೃತಿ ಮಂಧಾನ (2) ಬೇಗನೆ ನಿರ್ಮಿಸಿದರು. ಆ ಬಳಿಕ ಬಂದ ಯಶಿಕಾ ಭಾಟಿಯಾ (4) ರನೌಟ್ ಆಗಿ ಹೊರನಡೆದರು.
ಈ ಹಂತದಲ್ಲಿ ಜೊತೆಗೂಡಿದ ಜೆಮಿಮಾ ರೋಡ್ರಿಗಸ್ ಹಾಗೂ ನಾಯಕಿ ಹರ್ಮನ್ಪ್ರೀತ್ ಕೌರ್ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿದರು. 4ನೇ ವಿಕೆಟ್ಗೆ 69 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ಹಂತದಲ್ಲಿ 24 ಎಸೆತಗಳಲ್ಲಿ 43 ರನ್ ಬಾರಿಸಿದ ಜೆಮಿಮಾ ಔಟಾದರು.
ಮತ್ತೊಂದೆಡೆ ಅರ್ಧಶತಕ ಪೂರೈಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದ ಹರ್ಮನ್ಪ್ರೀತ್ ಕೌರ್ (52) ಹಾಫ್ ಸೆಂಚುರಿ ಬೆನ್ನಲ್ಲೇ ರನೌಟ್ಗೆ ಬಲಿಯಾದರು. ಇದರ ಬೆನ್ನಲ್ಲೇ ರಿಚಾ ಘೋಷ್ (14) ಕೂಡ ವಿಕೆಟ್ ಕೈಚೆಲ್ಲಿದರು. ಪರಿಣಾಮ ಕೊನೆಯ 4 ಓವರ್ಗಳಲ್ಲಿ ಟೀಮ್ ಇಂಡಿಯಾಗೆ 38 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ದೀಪ್ತಿ ಶರ್ಮಾ ಹಾಗೂ ಸ್ನೇಹ್ ರಾಣಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಅದರಂತೆ ಕೊನೆಯ 12 ಎಸೆತಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 20 ರನ್ಗಳು ಬೇಕಿತ್ತು. 19ನೇ ಓವರ್ನ ಕೊನೆಯ ಎಸೆತದಲ್ಲಿ ಸ್ನೇಹ್ ರಾಣಾ (11) ಬೌಲ್ಡ್ ಆದರು. ಕೊನೆಯ ಓವರ್ನಲ್ಲಿ 16 ರನ್ಗಳ ಟಾರ್ಗೆಟ್ ಪಡೆದ ಭಾರತ 10 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 5 ರನ್ಗಳ ರೋಚಕ ಜಯ ಸಾಧಿಸಿ ಫೈನಲ್ಗೆ ಪ್ರವೇಶಿಸಿತು. (ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ- 172/4 (20), ಭಾರತ- 167/8 (20).