ಬೆಂಗಳೂರು: ರಾಜ್ಯದಲ್ಲಿ ಮಳೆಯಿಂದಾಗಿ 25 ಮಂದಿ ಸಾವನ್ನಪ್ಪಿದ್ದಾರೆ. 2,077 ಮನೆ ಹಾನಿಗೀಡಾಗಿವೆ. 1 ಲಕ್ಷ ಹೆಕ್ಟೇರ್ನಲ್ಲಿ ಬೆಳೆ ಹಾನಿ ಸಂಭವಿಸಿದೆ. ಶೀಘ್ರ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದ್ದಾರೆ. ಇದೇ ವೇಳೆ, ಬೆಂಗಳೂರಿನ ರಾಜಕಾಲುವೆಗಳ ಅಭಿವೃದ್ಧಿಗೆ 2,000 ಕೋಟಿ ಮತ್ತು ರಸ್ತೆಗಳ ಅಭಿವೃದ್ಧಿಗೆ 5,000 ಕೋಟಿ ನೆರವು ನೀಡಲು ವಿಶ್ವಬ್ಯಾಂಕ್ ಒಪ್ಪಿದೆ. ಮತ್ತೆ ಗುಂಡಿ ಮುಚ್ತೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಅಂದ ಹಾಗೇ, ನವೆಂಬರ್, ಡಿಸೆಂಬರ್ನಲ್ಲಿಯೂ ಹೆಚ್ಚು ಮಳೆ ಆಗುವ ನಿರೀಕ್ಷೆ ಇದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಡಿಸಿಗಳಿಗೆ ಸಿಎಂ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರದ ಮಳೆಹಾನಿ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಬೆಂಗಳೂರಲ್ಲಿ ಅತಿ ಹೆಚ್ಚು ಮಳೆ ಆಗಿದೆ. ಸುಮಾರು 275 ಮಿಲಿ ಮೀಟರ್ ಮಳೆ, ನೂರು ವರ್ಷಗಳಲ್ಲಿ 3ನೇ ಅತಿ ಹೆಚ್ಚು ಮಳೆಯಾಗಿದೆ. ಪ್ರತಿ ಸಲ ಹೆಚ್ಚು ಮಳೆ ಬಂದಾಗ,ಪ್ರವಾಹ ಬಂದಾಗ ಹಾನಿ ಆಗುತ್ತಿದೆ. ಹಿಂದೆ ಸಿಎಂ ಆಗಿದ್ದಾಗ ರಾಜಕಾಲುವೆಗಳನ್ನ ಒತ್ತುವರಿ ತೆರವಿಗೆ ಸೂಚಿಸಿದ್ದೆ. 450 ಕಿಮೀ ರಾಜಕಾಲುವೆ ಅಭಿವೃದ್ಧಿ ಆಗಿತ್ತು, 173 ಕಿಮೀ ಉಳಿದುಕೊಂಡಿದೆ, ಅಲ್ಲದೇ 80 ಕಿಮೀ ಉಳಿದ ಕಾಲುವೆಗಳನ್ನ ಸರಿಪಡಿಸಬೇಕಿದೆ. ವಿಶ್ವಬ್ಯಾಂಕ್ 7,000 ಕೋಟಿ ರೂ. ಸಾಲ ನೀಡಲು ಒಪ್ಪಿದೆ. 3-4 ತಿಂಗಳಲ್ಲಿ ಅಂತಿಮವಾಗುತ್ತೆ ಎಂದು ಸಿಎಂ ಹೇಳಿದ್ದಾರೆ.
ಮುಂದುವರಿದು, ಕೆರೆಗಳ ಒತ್ತುವರಿ ತೆರವುಗೊಳಿಸಲು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗಡುವು ವಿಧಿಸಲಾಗಿತ್ತು. ಕೆರೆಗಳ ಒತ್ತುವರಿ ತೆರವುಗೊಳಿಸುವುದು, ಬಳಿಕ ಕೆರೆಗಳ ಹೂಳೆತ್ತುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು.ಉದ್ಯೋಗ ಖಾತ್ರಿ ಯೋಜನೆಯನ್ನು ಸಹ ಇದಕ್ಕೆ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ. ಹೆಚ್ಚುವರಿ ಬಿತ್ತನೆಗೆ ರೈತರಿಂದ ಬಿತ್ತನೆ ಬೀಜಕ್ಕೆ ಬೇಡಿಕೆ ಬಂದರೆ ಅದನ್ನು ಒದಗಿಸಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇವೆ ಎಂದಿದ್ದಾರೆ.
ರೈತರಿಗೆ ಪರ್ಯಾಯ ಬೆಳೆ ಬೆಳೆಸಲು ಬಿತ್ತನೆ ಬೀಜ ಲಭ್ಯವಿದೆ. ಬಿತ್ತನೆ ಬೀಜ ಮತ್ತು ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಬೇಕು ಸೂಚಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಪತ್ರ ಬರೆದಿದ್ದೇನೆ, ಪ್ರವಾಹ ಸ್ಥಳ, ಮಳೆಹಾನಿ ಸ್ಥಳಕ್ಕೆ ಭೇಟಿ ನೀಡಬೇಕು ಅಂತಾ ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.