ಪ್ರಪಂಚದಲ್ಲಿ ಹೆಚ್ಚು ವಜ್ರವನ್ನು ಉತ್ಪಾದಿಸುವ 2ನೇ ದೇಶವಾಗಿರುವ ಬೊಟ್ಸ್ವಾನದ ಗಣಿಯೊಂದರಲ್ಲಿ ಬೃಹತ್ ವಜ್ರವೊಂದು ಪತ್ತೆಯಾಗಿದೆ. ಇದು ಬೊಟ್ಸ್ವಾನದಲ್ಲಿ ಈವರೆಗೆ ದೊರೆತ ಅತಿ ಹೆಚ್ಚು ತೂಕದ ವಜ್ರವಾಗಿದ್ದು, ಪ್ರಪಂಚದಲ್ಲೇ ಈವರೆಗೆ ದೊರೆತಿರುವ 2ನೇ ದೊಡ್ಡ ವಜ್ರ ಎನ್ನಲಾಗಿದೆ.
2,492 ಕ್ಯಾರಟ್ ಇರುವ ಈ ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಬೋಟ್ಸ್ವಾನ ತಿಳಿಸಿದೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಇಷ್ಟು ತೂಕದ ವಜ್ರ ಪತ್ತೆಯಾಗಿರಲಿಲ್ಲ. ಈ ಹಿಂದೆ 1905ರಲ್ಲಿ ದೊರೆತಿದ್ದ, 3,106 ಕ್ಯಾರಟ್ ವಜ್ರವನ್ನು ಹಲವಾರು ರತ್ನಗಳನ್ನಾಗಿ ಕತ್ತರಿಸಲಾಗಿತ್ತು.
ಈ ಬಗ್ಗೆ ಹೇಳಿಕೆ ನೀಡಿರುವ ‘ಲುಕಾರಾ ಡೈಮಂಡ್ ಕಾರ್ಪೊರೇಷನ್’ ಗಣಿಗಾರಿಕೆ ಸಂಸ್ಥೆಯು, ‘ಪಶ್ಚಿಮ ಬೊಟ್ಸ್ವಾನದ ಕರೋವೆ ಗಣಿಯಲ್ಲಿ ಅಸಾಧಾರಣ ವಜ್ರವೊಂದು ಪತ್ತೆಯಾಗಿದೆ. ವಜ್ರವು ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ‘ಎಕ್ಸ್ ರೇ’ ತಂತ್ರಜ್ಞಾನದ ಮೂಲಕ ಅದನ್ನು ಪತ್ತೆ ಮಾಡಲಾಯಿತು’ ಎಂದು ತಿಳಿಸಿದೆ.
ಈ ಹಿಂದೆ 2019ರಲ್ಲಿ ಇದೇ ಕರೋವೆ ಗಣಿಯಲ್ಲಿ ಪತ್ತೆಯಾಗಿದ್ದ 1,758 ಕ್ಯಾರಟ್ ‘ಸೆವೆಲೊ’ ವಜ್ರವನ್ನು ಪ್ರಪಂಚದ ಎರಡನೇ ಅತಿ ದೊಡ್ಡ ವಜ್ರ ಎಂದು ಗುರುತಿಸಲಾಗಿತ್ತು. ಫ್ರೆಂಚ್ ಫ್ಯಾಷನ್ ಹೌಸ್ ‘ಲೂಯಿ ವಿಟೋನ್’ ಆ ವಜ್ರವನ್ನು ಖರೀದಿಸಿತ್ತು. ಆದರೆ ಅದರ ಮೊತ್ತವನ್ನು ಬಹಿರಂಗಪಡಿಸಿಲ್ಲ. ಇದೀಗ ಅದಕ್ಕಿಂತಲೂ ದೊಡ್ಡ ವಜ್ರ ಪತ್ತೆಯಾಗಿದೆ.