ಖಾರ್ಟೌಮ್: ಕಳೆದ ನಾಲ್ಕದೈದು ದಿನಗಳಿಂದ ಸೇನಾ ಪಡೆ ಹಾಗೂ ಅರೆ ಸೇನಾ ಪಡೆಗಳ ನಡುವೆ ಸುಡಾನ್ ನಲ್ಲಿ ಯುದ್ಧ ನಡೆಯುತ್ತಿದೆ. ಈ ಆಂತರಿಕ ಸಂಘರ್ಷದಲ್ಲಿ ಸುಡಾನ್ನಲ್ಲಿ ಸುಮಾರು ನಾಲ್ಕು ಸಾವಿರ ಭಾರತೀಯರಿದ್ದು, ಅವರ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕುಟುಂಬಸ್ಥರು ಕೂಡಲೇ ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಾಲ್ಕು ಸಾವಿರ ಜನರಲ್ಲಿ 1,200ಕ್ಕೂ ಹೆಚ್ಚು ಜನರು ಒಂದೂವರೆ ಶತಮಾನದಿಂದಲೂ ಅಲ್ಲಿಯೇ ನೆಲೆಸಿದ್ದಾರೆ. ಅಲ್ಲಿನ ಆರ್ಥಿಕತೆಯಲ್ಲಿ ಇವರ ಪಾಲು ದೊಡ್ಡದಿದೆ.
‘ನನ್ನ ತಂದೆ ಮುಂಬೈನಿಂದ ವ್ಯವಹಾರ ನಿಮಿತ್ತ ಸುಡಾನ್ಗೆ ತೆರಳಿದ್ದರು. ವಾಪಸ್ ಮರಳುವಾಗ ವಿಮಾನ ರದ್ದಾಗಿರುವುದಾಗಿ ತಿಳಿಸಿದ್ದರು. ಕೆಲಕಾಲ ನನ್ನ ಅಪ್ಪ ಸೇರಿದಂತೆ ಅಲ್ಲಿದ್ದ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಹೋಗದಂತೆ ನಿರ್ಬಂಧಿಸಲಾಗಿತ್ತು ಎಂದು ಹೇಳಿದ್ದರು. ಬಳಿಕ ಅವರು ಉಳಿದುಕೊಂಡಿದ್ದ ಹೋಟೆಲ್ಗೆ ತೆರಳಿದ್ದಾರೆ. ಅದಾದ ನಂತರ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದು ಪುತ್ರಿ ಮಾನ್ಸಿ ಸೇಟ್ ತಿಳಿಸಿದ್ದಾರೆ.
‘ಅಪ್ಪನಿಗೆ ಈಗ 63 ವರ್ಷ. ಅವರ ಆರೋಗ್ಯ ಸ್ಥಿತಿ ನನ್ನಲ್ಲಿ ಭಯ ಹುಟ್ಟಿಸಿದೆ. ಅವರೊಂದಿಗೆ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಲು ಪ್ರಯತ್ನಿಸಿದೆ. ಆದರೆ, ಸಂಪರ್ಕಕ್ಕೆ ಸಿಗಲಿಲ್ಲ’ ಎಂದು ತಿಳಿಸಿದ್ದಾರೆ.
‘ಅಲ್ಲಿರುವ ನನ್ನ ಸಂಬಂಧಿಕರೊಂದಿಗೆ ಮಾತನಾಡಿದ್ದು, ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಅಲ್ಲಿನ ಅರೆಸೇನಾ ಪಡೆ ಲೂಟಿಗೆ ಇಳಿದಿದೆ. ನಿವಾಸಿಗಳ ಕಾರುಗಳನ್ನು ಕದ್ದೊಯ್ಯುತ್ತಿದ್ದಾರೆ. ಹೋಟೆಲ್ನಲ್ಲಿ ಉಳಿದುಕೊಂಡಿರುವವರಿಗೂ ಸುರಕ್ಷತೆ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಹೋಟೆಲ್ ಸೇವೆಯೂ ಬಂದ್ ಆಗಲಿದೆ’ ಎಂಬುದಾಗಿ ಅಳಲು ತೋಡಿಕೊಂಡರು ಎಂದು ಹೇಳಿದ್ದಾರೆ.
ಖಾರ್ಟೂಮ್ನಲ್ಲಿ ಗುಂಡು ತಗುಲಿ ಗಾಯಗೊಂಡು ಮೃತಪಟ್ಟ ಭಾರತೀಯನನ್ನು ನಿವೃತ್ತ ಸೈನಿಕ ಅಲ್ಬರ್ಟ್ ಅಗೆಸ್ಟೆನ್ ಎಂದು ಗುರುತಿಸಲಾಗಿದೆ.