ಅಕ್ಟೋಬರ್ 14ರಂದು ಅಹಮದಾಬಾದ್ನಲ್ಲಿ ಭಾರತ-ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ವಿಶ್ವಕಪ್ ಪಂದ್ಯದ ಟಿಕೆಟ್ಗಳು ಈಗಾಗಲೆ ಸೋಲ್ಡ್ಔಟ್ ಆಗಿವೆ.
ಇನ್ನೂ ಕಾಳಸಂತೆಯಲ್ಲಿ ಈ ಪಂದ್ಯದ ಟಿಕೆಟ್ಗಳಿಗೆ 57 ಲಕ್ಷ ರೂ. ತನಕವೂ ಡಿಮಾಂಡ್ ಮಾಡಲಾಗುತ್ತಿದೆ ಎನ್ನಲಾಗಿದೆ. ಇನ್ನೂ ಕೆಲ ಟಿಕೆಟ್ಗಳನ್ನು 18ರಿಂದ 22 ಲಕ್ಷ ರೂ.ಗಳಿಗೆ ರೀಸೇಲ್ಗೆ ಇಡಲಾಗಿದೆ. ಭಾರತ ತಂಡ ಅಕ್ಟೋಬರ್ 8ರಂದು ಆಸ್ಟ್ರೆಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಾಗುವ ಪಂದ್ಯದ ಟಿಕೆಟ್ಗೆ 2.85 ಲಕ್ಷ ರೂ. ರೀಸೇಲ್ ಬೆಲೆ ನಿಗದಿಪಡಿಸಲಾಗಿದ್ದರೆ, ಭಾರತ-ಇಂಗ್ಲೆಂಡ್ ಮತ್ತು ಭಾರತ-ದಕ್ಷಿಣ ಆಫ್ರಿಕಾ ಪಂದ್ಯದ ಟಿಕೆಟ್ಗಳು ಗರಿಷ್ಠ 2.35 ಲಕ್ಷ ರೂ. ಮೌಲ್ಯ ಹೊಂದಿವೆ. ವಿಶ್ವಕಪ್ ಟಿಕೆಟ್ಗಳು ಕಾಳಸಂತೆಯಲ್ಲಿ ಇಷ್ಟೊಂದು ದುಬಾರಿ ಮೊತ್ತಕ್ಕೆ ಮರುಮಾರಾಟವಾಗುತ್ತಿರುವುದಕ್ಕೆ ಕ್ರಿಕೆಟ್ ಪ್ರೇಮಿಗಳು, ಟೂರ್ನಿಯ ಅಧಿಕೃತ ಟಿಕೆಟ್ ಮಾರಾಟ ಕಂಪನಿ ‘ಬುಕ್ ಮೈ ಶೋ’ ವಿರುದ್ಧ ಕಿಡಿಕಾರುತ್ತಿದ್ದಾರೆ.
ಬುಕ್ ಮೈ ಶೋನಲ್ಲಿ ಎಲ್ಲ ಟಿಕೆಟ್ಗಳು ಮಾರಾಟವಾಗಿವೆ ಎಂದು ತೋರಿಸಲಾಗುತ್ತಿದೆ. ಆದರೆ ವಯಾಗೋಗೋ ವೆಬ್ಸೈಟ್ನಲ್ಲಿ ದುಬಾರಿ ಮೊತ್ತಕ್ಕೆ ಮಾರಾಟ ಮಾಡುತ್ತಿರುವವರಿಗೆ ಎಲ್ಲಿಂದ ಟಿಕೆಟ್ಗಳು ಸಿಗುತ್ತಿವೆ? 1.32 ಲಕ್ಷ ಪ್ರೇಕ್ಷಕರ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಭಾರತ-ಪಾಕ್ ಪಂದ್ಯದ ಎಷ್ಟು ಟಿಕೆಟ್ಗಳನ್ನು ಸಾರ್ವಜನಿಕರಿಗೆ ಇದುವರೆಗೆ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ಬುಕ್ಮೈಶೋ ಅಧಿಕೃತ ಮಾಹಿತಿ ನೀಡಬೇಕು ಎಂದು ಕ್ರಿಕೆಟ್ ಪ್ರೇಮಿಗಳು ಕಿಡಿಕಾರಿದ್ದಾರೆ.