ಬೆಂಡೆಕಾಯಿ ಎಂದ ತಕ್ಷಣ ನೆನಪಾಗೋದು ಅದರಿಂದ ತಯಾರಿಸಿದ ಅಡುಗೆಗಳು. ಪಲ್ಯ, ಸಾಂಬರ್, ಸೂಪ್, ಸಲಾಡ್ ಹೀಗೆ ಡಿಫರೆಂಟ್ ಆಗಿ ಬೆಂಡೆಕಾಯಿ ನಿಮ್ಮ ಹೊಟ್ಟೆ ಸೇರುತ್ತದೆ. ಜಿಡ್ಡಿನ ಅಂಶವಿರುವ ಬೆಂಡೆಕಾಯಿಯ ಆರೋಗ್ಯಕರ ಅಂಶಗಳು ಒಳಗೊಂಡಿರುತ್ತವೆ. ಬೆಂಡೆಕಾಯಿ ಬರೀ ಬಾಯಿರುಚಿಗಷ್ಟೇ ಸೀಮಿತವಲ್ಲ, ಆರೋಗ್ಯಕ್ಕೂ ತುಂಬಾ ಒಳ್ಳೆಯದು ಎಂಬ ವಿಚಾರ ಹಲವರಿಗೆ ತಿಳಿದಿರಲ್ಲ.
ಹೌದು. ಬೆಂಡೆಕಾಯಿಯಲ್ಲಿ ಕಬ್ಬಿಣದ ಅಂಶ, ಫೈಬರ್ ಅಂಶ ಅಧಿಕವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದ್ದರಿಂದ ಇದು ಹೃದಯಕ್ಕೆ, ಕರುಳಿಗೆ ಒಳ್ಳೆಯದು. ದೇಹದ ತೂಕ ಇಳಿಸಲು ಕೂಡ ಬೆಂಡೆಕಾಯಿ ಉಪಯುಕ್ತ. ಅಷ್ಟೇ ಅಲ್ಲದೆ ಇದು ಕೂದಲ ಆರೋಗ್ಯವನ್ನು ಕಾಪಾಡಿಕೊಳ್ಳುವ ಒಂದೊಳ್ಳೆಯ ಮದ್ದಾಗಿದೆ.
ಬೆಂಡೆಕಾಯಿಯಲ್ಲಿ ಅಡಗಿರುವ ಆರೋಗ್ಯ ಗುಣಗಳೇನು?
ಹೃದಯಕ್ಕೆ ಒಳ್ಳೆದು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಂಡೆಕಾಯಿ ಬಹಳ ಒಳ್ಳೆಯದು. ಇದರಲ್ಲಿ ಫೈಬರ್ ಅಂಶ ಜಾಸ್ತಿ ಇರುವುದರಿಂದ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸಿದವರಿಗೆ ಹೃದಯಾಘಾತವಾಗುವ ಸಂಭವ ಕಡಿಮೆ ಇರುತ್ತದೆ.
ಕರುಳಿನ ಕ್ಯಾನ್ಸರ್ ನಿವಾರಿಸುತ್ತೆ: ದೊಡ್ಡ ಕರುಳಿನ ಕ್ಯಾನ್ಸರ್ ದೂರ ಮಾಡಲು ಬೆಂಡೆಕಾಯಿ ಒಳ್ಳೆಯ ಮದ್ದಾಗಿದೆ. ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದವರು ಬೆಂಡೆಕಾಯಿಯನ್ನು ಸೇವಿಸಿದರೆ ಒಳ್ಳೆಯದು. ಯಾಕೆಂದರೆ ಬೆಂಡೆಕಾಯಿ ಸೇವಿಸಿದರೆ ಕರುಳಿನಲ್ಲಿರುವ ಟಾಕ್ಸಿಕ್ ಅಂಶವನ್ನು ಹೋಗಲಾಡಿಸಿ, ಕರುಳಿನ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ.
ಜೀರ್ಣಕ್ರಿಯೆಗೆ ಉತ್ತಮ: ಇದರಲ್ಲಿ ಹೆಚ್ಚಿನ ಫೈಬರ್ ಅಂಶ ಅಡಕವಾಗಿರುವುದರಿಂದ ಜೀರ್ಣಕ್ರಿಯೆಯನ್ನು ಸುಲಭ ಮಾಡುತ್ತದೆ. ಹಾಗೆಯೇ ಮಲಬದ್ಧತೆ ಸಮಸ್ಯೆಯನ್ನು ಕೂಡ ದೂರ ಮಾಡಲು ಬೆಂಡೆಕಾಯಿ ಉತ್ತಮ ಔಷಧಿಯಾಗಿದೆ.
ರಕ್ತಹೀನತೆಯನ್ನು ತಡೆಗಟ್ಟುತ್ತದೆ: ಬೆಂಡೆಕಾಯಿಯಲ್ಲಿರುವ ಕಬ್ಬಿಣದ ಅಂಶ ನಮ್ಮ ದೇಹಕ್ಕೆ ಬಹಳ ಪ್ರಯೋಜನಕಾರಿ, ಇದು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿ ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಹೀಗಾಗಿ ರಕ್ತಹೀನತೆಯಿಂದ ದೇಹವನ್ನು ರಕ್ಷಿಸವಲ್ಲಿ ಬೆಂಡೆಕಾಯಿ ಸಹಕಾರಿಯಾಗಿದೆ.
ತೂಕ ಇಳಿಸಲು ಸಹಕಾರಿ: ತೂಕ ಇಳಿಸಿಕೊಳ್ಳುವವರು ಬೆಂಡೆಕಾಯಿ ಸೇವನೆ ಮಾಡಬಹುದು. ಯಾಕೆಂದರೆ ಇದರಲ್ಲಿ ಕ್ಯಾಲೋರಿ ಇರುವುದಿಲ್ಲ. ಆದರೆ ಫೈಬರ್ ಅಂಶ ಹೇರಳವಾಗಿರುತ್ತದೆ. ಇದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ.
ಕೂದಲ ಆರೈಕೆಗೆ ಉತ್ತಮ: ಕೂದಲು ಉದುರುವಿಕೆ, ಕಡಿಮೆ ಕೂದಲು ಹೀಗೆ ಕೂದಲು ಸಮಸ್ಯೆಯಿಂದ ಬಳಲುವವರಿಗೆ ಬೆಂಡೆಕಾಯಿ ಉತ್ತಮ ಮದ್ದು. ದಟ್ಟ ಹಾಗೂ ಕಪ್ಪನೆಯ ಕೂದಲನ್ನು ಬಯಸುವವರು ಬೆಂಡೆಕಾಯಿ ಸೇವನೆ ಮಾಡಬೇಕು. ಇದು ಕೂದಲಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಹಾಗೆಯೇ ಬೆಂಡೆಕಾಯಿಯನ್ನು ಸಣ್ಣದಾಗಿ ಕತ್ತರಿಸಿ ಅದಕ್ಕೆ ನಿಂಬೆ ರಸವನ್ನು ಸೇರಿಸಿ, ಆ ರಸ ತಲೆಗೆ ಹಚ್ಚಿ, ಸ್ವಲ್ಪ ಸಮಯದ ಬಳಿಕ ತೊಳೆದರೆ ಕೂದಲುದುರುವುದು ಕಡಿಮೆಯಾಗುತ್ತದೆ. ಇಷ್ಟೆಲ್ಲ ಆರೋಗ್ಯಕರ ಅಂಶವನ್ನು ತನ್ನಲ್ಲಿ ಬಚ್ಚಿಟ್ಟಿಕೊಂಡಿರುವ ಬೆಂಡೆಕಾಯಿಯನ್ನು ನೀವೂ ತಿನ್ನಿ, ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಿ.