ನವದೆಹಲಿ: ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಕ್ರಿಕೆಟ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವದ ಹಕ್ಕನ್ನು ಟಾಟಾ ಗ್ರೂಪ್ (TaTa Group) ತನ್ನದಾಗಿಸಿಕೊಂಡಿದೆ.
ಚೀನಾದ (China) ಹ್ಯಾಂಡ್‌ಸೆಟ್ ತಯಾರಕರಾದ ವಿವೋ (Vivo), ಒಪ್ಪಂದದಿಂದ ಹಿಂದೆ ಸರಿದ ನಂತರ 5 ವರ್ಷಗಳ ಅವಧಿಗೆ ಟಾಟಾ ಸಮೂಹ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ ಎಂದು ಬಿಸಿಸಿಐ (BCCI) ಮೂಲಗಳು ತಿಳಿಸಿವೆ.
ಕಳೆದ ವರ್ಷ ಟಾಟಾ ಸಮೂಹವು ಇಂಡಿಯನ್ ಪ್ರೀಮಿಯರ್ ಲೀಗ್ ಟೈಟಲ್ ಪ್ರಾಯೋಜಕತ್ವ ಪಡೆದಿತ್ತು. ಇದೀಗ ಡಬ್ಲ್ಯೂಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆಯಲು 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ಟೈಟಲ್ ಪ್ರಾಯೋಕತ್ವದ ಮೌಲ್ಯವನ್ನು ಇನ್ನೂ ಖಚಿತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಮಹಿಳಾ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿಯ ಪಂದ್ಯಗಳು ಮಾರ್ಚ್ 4ರಿಂದ ಮುಂಬೈನ ಬ್ರಬೌರ್ನ್ ಕ್ರೀಡಾಂಗಣ ಮತ್ತು ಡಿ.ವೈ. ಪಾಟೀಲ್ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಬಿಸಿಸಿಐ ಈಗಾಗಲೇ ಮಹಿಳಾ ಮಾಧ್ಯಮ ಹಕ್ಕು ಮಾರಾಟದಿಂದ 951 ಕೋಟಿ ರೂ. ಮತ್ತು 5 ತಂಡಗಳ ಮಾರಾಟದಿಂದ 4,700 ಕೋಟಿ ರೂ. ಆದಾಯ ಬಾಚಿಕೊಂಡಿದೆ.
ಈ ತಿಂಗಳ ಆರಂಭದಲ್ಲಿ ನಡೆದ ಆಟಗಾರ್ತಿಯರ ಹರಾಜಿನಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (Smriti Mandhana) ಅತ್ಯಧಿಕ 3.40 ಕೋಟಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಕರಿಯಾದರು.