ಬೆಂಗಳೂರು ;– ಗ್ಯಾರಂಟಿಗಳಿಂದ ಪ್ರತಿ ಕುಟುಂಬಕ್ಕೆ 4 ರಿಂದ 5 ಸಾವಿರ ರೂಪಾಯಿ ನೆರವಾಗಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ 5 ಯೋಜನೆಗಳ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ರಾಜಕೀಯ ಕೂಡ ನಡೆಯುತ್ತಿದೆ. ಈ ಯೋಜನೆಗೆ ಅಗತ್ಯವಿರುವ ಅಕ್ಕಿಯನ್ನು ನೀಡಿ ಕೇಂದ್ರ ಸರ್ಕಾರ ತನ್ನ ಹೃದಯ ಶ್ರೀಮಂತಿಕೆ ಮೆರೆಯಬಹುದಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಟೀಕಿಸಿದರು.
ಆಹಾರ ಭದ್ರತೆ ಕಾಯ್ದೆ ತಂದವರು ಯಾರು?. ಏಕೆ ತಂದರು ಎಂದು ಅರಿಯಬೇಕು. ದೇಶವನ್ನು ಹಸಿವುಮುಕ್ತ ಮಾಡುವ ಉದ್ದೇಶದಿಂದ ಯುಪಿಎ ಸರ್ಕಾರ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿ ಬಡ ಜನರಿಗೆ ಆಹಾರ ಧಾನ್ಯ ನೀಡುವುದನ್ನು ಸಂವಿಧಾನದ ಹಕ್ಕಾಗಿ ತಂದಿದ್ದನ್ನು ನೆನಪಿಸಿಕೊಳ್ಳಬೇಕು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷೆಯಾಗಿ, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಆಗಿದ್ದಾಗ ಜಾರಿಗೆ ತರಲಾಗಿತ್ತು. ಆದರೆ, ಬಿಜೆಪಿಯ ಕೇಂದ್ರ ಸರ್ಕಾರ ಬಡವರಿಗೆ ಅಕ್ಕಿ ಯೋಜನೆ ಜಾರಿ ಮಾಡಿದೆ ಎಂದು ಕೆಲವರು ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಕಿಡಿಕಾರಿದರು.