ಟ್ವಿಟರ್ ನಲ್ಲಿ ಖಾತೆಗಳಿಗೆ ನೀಡಲಾಗುವ ಬ್ಲೂಟಿಕ್ ಗೆ ಸಾಕಷ್ಟು ಮಹತ್ವ ಇದೆ. ಸೆಲೆಬ್ರಿಟಿಗಳ ನಕಲಿ ಖಾತೆ ಯಾವುದು ಹಾಗೂ ಅಸಲಿ ಖಾತೆ ಯಾವುದು ಎಂಬುದು ತಿಳಿಯಲು ಈ ಬ್ಲೂಟಿಕ್ ಸಹಕಾರಿಯಾಗುತ್ತಿತ್ತು. ಆದರೆ ಇದೀಗ ಯಶ್, ಅಲ್ಲು ಅರ್ಜುನ್, ಅಮಿತಾಬ್ ಬಚ್ಚನ್ ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳ ಬ್ಲೂಟಿಕ್ ಟ್ವಿಟರ್ ಖಾತೆಯಿಂಧ ಮಾಯವಾಗಿದೆ.
ಇದೀಗ ಇವರುಗಳು ಮರಳಿ ಬ್ಲೂಟಿಕ್ ಪಡೆಯಬೇಕು ಎಂದರೆ ಹಣ ಪಾವತಿಸಬೇಕು. ಏಪ್ರಿಲ್ 20ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಇದೀಗ ಸೆಲೆಬ್ರಿಟಿಗಳ ಖಾತೆಯೂ ಜನಸಾಮಾನ್ಯರ ಖಾತೆಯಂತಾಗಿದೆ. ಇದರಿಂದಾಗಿ ಸಾಕಷ್ಟು ಮಂದಿಗೆ ಗೊಂದಲ ಉಂಟಾಗಿದೆ.
ಎಲಾನ್ ಮಸ್ಕ್ ಟ್ವಿಟರ್ ನ ನೂತನ ಸಿಇಒ ಆದ ಬಳಿಕ ಹೊಸ ಹೊಸ ನಿಯಮ ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ಬ್ಲೂ ಪಡೆಯಲು ಹಣ ಪಾವತಿಸಬೇಕು ಎಂಬ ನಿಯಮ ಕೂಡ ಒಂದಾಗಿದೆ. ಈ ಮೊದಲು ಸೆಲೆಬ್ರಿಟಿಗಳು ಖಾತೆ ತೆರೆಯುತ್ತಾರೆ ಎಂದಾದರೆ ಟ್ವಿಟರ್ ಕಡೆಯಿಂದ ನೀಲಿ ಟಿಕ್ ಸಿಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಟ್ವಿಟರ್ ಬ್ಲೂ ಪಡೆಯಬೇಕು ಎಂದಾದರೆ ತಿಂಗಳು ಅಥವಾ ಒಂದು ವರ್ಷದ ಚಂದಾದಾರತ್ವ ಪಡೆಯಬೇಕು. ಈ ಕ್ರಮದಿಂದ ಹಲವಾರು ಸೆಲೆಬ್ರಿಟಿಗಳು ತಮ್ಮ ನೀಲಿ ಟಿಕ್ ಮಾರ್ಕ್ ಅನ್ನು ಕಳೆದುಕೊಂಡಿದ್ದಾರೆ. ಈಗ ಇದನ್ನು ಮರಳಿ ಪಡಯಬೇಕು ಎಂದಾದರೆ ಹಣ ಪಾವತಿಸಬೇಕು. ಬ್ಲೂಟಿಕ್ಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕಾಗಿದೆ.