ಜುಲೈ 12 ರಿಂದ ಭಾರತ ತಂಡ, ವೆಸ್ಟ್ ಇಂಡೀಸ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುವ ಮೂಲಕ 2023-25ರ ಟೆಸ್ಟ್ ಚಾಂಪಿಯನ್ಷಿಪ್ ಅಭಿಯಾನ ಆರಂಭಿಸಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಶುಕ್ರವಾರ 16 ಸದಸ್ಯರ ಭಾರತ ಟೆಸ್ಟ್ ತಂಡವನ್ನು ಪ್ರಕಟಿಸಿತ್ತು. ಐಪಿಎಲ್ ಹಾಗೂ ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆ ಹರಿಸಿದ್ದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಸ್ಥಾನ ಪಡೆದುಕೊಂಡಿದ್ದಾರೆ.
ಡಬ್ಲ್ಯುಟಿಸಿ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಹೊರಗಿಟ್ಟು, ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ. ಹಾಗಾಗಿ ಮೂರನೇ ಕ್ರಮಾಂಕದಲ್ಲಿ ಜೈಸ್ವಾಲ್ ಅಥವಾ ಗಾಯಕ್ವಾಡ್ ಅವರಲ್ಲಿ ಒಬ್ಬರನ್ನು ಆಡಿಸುವ ಸಾಧ್ಯತೆ ಇದೆ.
ಭಾರತ ತಂಡಕ್ಕೆ ಆಯ್ಕೆಯಾದ ಬಳಿಕ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ್ದ ಯಶಸ್ವಿ ಜೈಸ್ವಾಲ್, “ನಾನು ಭಾರತ ತಂಡಕ್ಕೆ ಆಯ್ಕೆಯಾದ ವಿಷಯ ತಿಳಿದ ಬಳಿಕ ನನ್ನ ಅಪ್ಪ ಕಣ್ಣೀರಿಟ್ಟಿದ್ದರು. ನಾನು ಈಗ ಅಭ್ಯಾಸದಲ್ಲಿ ನಿರತನಾಗಿರುವ ಕಾರಣ ಅಮ್ಮನನ್ನು ಭೇಟಿ ಮಾಡಲು ಆಗಿಲ್ಲ. ಮುಂದೊಂದು ದಿನ ಆಕೆಯನ್ನು ಭೇಟಿಯಾದಾಗ ಆಕೆಯ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ನೋಡಲು ಉತ್ಸುಕನಾಗಿದ್ದೇನೆ,” ಎಂದು ಹೇಳಿದ್ದಾರೆ.
“ನನಗೆ ತುಂಬಾ ಸಂತೋಷವಾಗುತ್ತಿದೆ. ಭಾರತ ತಂಡದ ಪರ ಅತ್ಯುತ್ತಮ ಪ್ರದರ್ಶನ ತೋರಲು ಎದುರು ನೋಡುತ್ತಿದ್ದೇನೆ. ತಂಡದಲ್ಲಿ ಸ್ಥಾನ ಸಿಕ್ಕಿರುವುದರಿಂದ ನಾನು ತುಂಬಾ ಆತಂಕಗೊಂಡಿದ್ದು, ಅದರಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ,” ಎಂದು ಎಡಗೈ ಯುವ ಆರಂಭಿಕ ತಿಳಿಸಿದ್ದಾರೆ.
ಮುಂಬೈ ಪರ ದೇಶಿ ಕ್ರಿಕೆಟ್ ಆಡಿರುವ ಅನುಭವ ಹೊಂದಿರುವ ಎಡಗೈ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್, 15 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಂದ 9 ಶತಕ ಸೇರಿದಂತೆ 80.21ರ ಸರಾಸರಿಯಲ್ಲಿ 845 ರನ್ ಸಿಡಿಸಿದ್ದಾರೆ ಹಾಗೂ ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ರನ್ ಹೊಳೆ ಹರಿಸಿದ ಜೈಸ್ವಾಲ್, 163.61 ಸ್ಟ್ರೆಕ್ ರೇಟ್ನಲ್ಲಿ 625 ರನ್ ಬಾರಿಸಿದ್ದು, ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ 20 ಸರಣಿಯಲ್ಲೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿದ್ದಾರೆ.