ಮಂಡ್ಯ: ವಿಪಕ್ಷನಾಯಕ ಸಿದ್ದರಾಮಯ್ಯ ಯಾವುದೇ ಕ್ಷೇತ್ರಕ್ಕೆ ಹೋದರೂ ಮುಂದಿನ ಮುಖ್ಯಮಂತ್ರಿ ಎಂದು ಕೂಗು ಕೇಳಿ ಬರುತ್ತಿದೆ. ಈಗ ಸ್ವತಃ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯ (Yatindra Siddaramaiah) ತಂದೆ ಸಿದ್ದರಾಮಯ್ಯ (Siddaramaiah) ಅವರು ಮತ್ತೆ ಸಿಎಂ ಆಗಬೇಕು ಎಂದಿದ್ದಾರೆ. ಒಬ್ಬ ಮಗನಾಗಿ ತಂದೆ ಸಿಎಂ ಆಗಲಿ ಎಂದು ಯಾರಿಗೆ ಆಸೆ ಇರಲ್ಲ ಹೇಳಿ. ಖಂಡಿತ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಅನ್ನೋದು ನನ್ನ ಆಸೆ ಎಂದು ಯತೀಂದ್ರ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ. “ಯತೀಂದ್ರ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಘೋಷಿಸಿದ್ದು, ತಂದೆಯ ಗೆಲವಿಗಾಗಿ ಕಸರತ್ತು ನಡೆಸಿದ್ದಾರೆ. ಸಿದ್ದರಾಮಯ್ಯ ಅವರೇ ಘೋಷಿಸಿಕೊಂಡಂತೆ ಈ ಬಾರಿ ಅವರದ್ದು, ಕೊನೆಯ ಚುನಾವಣೆಯಾಗಿದ್ದು, ಶತಾಯಗತಾಯ ಗೆಲ್ಲಿಸಿ ಸಿಎಂ ಕುರ್ಚಿ ಮೇಲೆ ತಂದೆಯನ್ನು ಕೂಡಿಸಲು ಯತೀಂದ್ರ ಸಿದ್ದರಾಮಯ್ಯ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ತಿರುಗುತ್ತಿದ್ದಾರೆ. ಆದರೂ ಕೂಡ ಸಿದ್ದರಾಮಯ್ಯ ಸಿಎಂ ಆಗುವುದು ಸುಲಭದ ದಾರಿಯಾಗಿಲ್ಲ.
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಹಿಂದೆ ಸಿಎಂ ಆಗಿದ್ದಾಗ ತಂದೆಯವರು ಉತ್ತಮ ಆಡಳಿತ ನೀಡಿದ್ದರು. ಮತ್ತೆ ಸಿಎಂ ಆದರೆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಾರೆ. ಕಳೆದ ಬಾರಿ ಅವರು ಒಳ್ಳೆ ಆಡಳಿತ ಕೊಟ್ಟಿದ್ದರೂ ಕೂಡ ಜನ ಬಹುಮತ ನೀಡಿರಲಿಲ್ಲ. ಈ ಬಾರಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟು ತಂದೆಯವರು ಮುಖ್ಯಮಂತ್ರಿಯಾದರೇ, ತಂದೆಯವರು ಆಗ ಕೊಟ್ಟ ಆಡಳಿತಕ್ಕೆ ಮತ್ತೊಮ್ಮೆ ಒಂದು ವ್ಯಾಲಿಡೇಷನ್ ಸಿಕ್ಕಂತಾಗುತ್ತೆ. ತಂದೆಯವರು ಸಿಎಂ ಆದರೆ ಖಂಡಿತ ರಾಜ್ಯವನ್ನ ಅಭಿವೃದ್ಧಿ ಪಥದ ಕಡೆಗೆ ತೆಗೆದುಕೊಂಡು ಹೋಗುತ್ತಾರೆ ಎಂಬ ಆಶಯವಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.