ಯೆಮೆನ್: ರಾಜಧಾನಿ ಸಹಾದಲ್ಲಿ ರಂಜಾನ್ ಆಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿದ್ದು, 85 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಸಾಕಷ್ಟು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ರಂಜಾನ್ ಆಚರಣೆ ಪ್ರಯುಕ್ತ ಆರ್ಥಿಕ ನೆರವು ನೀಡಲು ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಭಾಗಿಯಾಗಿದ್ದು ಈ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಮಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು, ಜನರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಪೊಲೀಸರು ಹಾರಿಸಿದ್ದ ಗುಂಡು ವಿದ್ಯುತ್ ತಂತಿಗೆ ತಗುಲಿ ಸ್ಫೋಟಗೊಂಡಿದ್ದು, ಏಕಾಏಕಿ ಜನ ಭಯಭೀತರಾಗಿದ್ದಾರೆ. ಭಯದಿಂದ ಓಡಿದ್ದು, ಕೆಳಗೆ ಬಿದ್ದವರನ್ನೂ ಗಮನಿಸದೆ ತುಳಿದು ಓಡಿದ್ದಾರೆ. ಘಟನೆಯಲ್ಲಿ 85ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. 13 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಸ್ಥಳೀಯ ಆಡಳಿತದ ಸಹಾಯವಿಲ್ಲದೆ ವ್ಯಾಪಾರಿಗಳು ಕಾರ್ಯಕ್ರಮ ಆಯೋಜಿಸಿದ್ದು, ಆಯೋಜಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.