ಬೆಂಗಳೂರು: ಕೆಪಿಸಿಸಿ ಕಚೇರಿ ಬಳಿ ಚಿತ್ರದುರ್ಗ ಮೊಳಕಾಲ್ಮುರು ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಯೋಗೇಶ್ ಬಾಬು ಬೆಂಬಲಿಗರು ಪ್ರತಿಭಟನೆ ನಡೆಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ಗೆ ಜೈಕಾರ ಹಾಕಿ ಯೋಗೇಶ್ ಬಾಬುಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿವಕುಮಾರ್, ರಾಜ್ಯದ ಜನರ ಧ್ವನಿ ಕಾಂಗ್ರೆಸ್ ಕಡೆ ಆಗುತ್ತಿದೆ. ನಮ್ಮ ನಡೆ ಅಧಿಕಾರದ ಕಡೆಗೆ ಇದೆಎನ್ನೋದಕ್ಕೆ ಜನರುತೋರಿಸುತ್ತಿರುವ ಪ್ರೀತಿ, ಬಿಜೆಪಿ ತೊರೆದು ನಮ್ಮ ಪಕ್ಷದ ಬಾಗಿಲು ತಟ್ಟುತ್ತಿರುವ ಅನೇಕ ನಾಯಕರೇ ಇದಕ್ಕೆ ಸಾಕ್ಷಿ. ಎನ್ ವೈ ಗೋಪಾಲಕೃಷ್ಣ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಮ್ಮಲ್ಲಿಗೆ ಬಂದಿದ್ದಾರೆ. ಏ.9ರಂದು ತಾರೀಖು ಶಿವಲಿಂಗೇಗೌಡ ತಮ್ಮ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಸೇರುತ್ತಾರೆ.
ದಲಿತ ಕವಿ ಸಿದ್ದಲಿಂಗಯ್ಯ ಮಾತು ನೆನಪಾಗ್ತದೆ: ಹೋರಾಟದ ಸಾಗರ ಸಾವಿರಾರು ನದಿಗಳು ಸಾಲು ಎಲ್ಲ ನದಿಗಳು ಸಮುದ್ರಕ್ಕೆ ತಲುಪುತ್ತದೆ. ಕಾಂಗ್ರೆಸ್ ಅಂದರೆ ಹೋರಾಟದ ಸಾಗರ, ಇದಕ್ಕೆ ನಾಯಕರು ಬಂದು ನದಿಗಳಂತೆ ಸೇರುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ದ ಜನ ಕಾಂಗ್ರೆಸ್ಗೆ ಬೆಂಬಲ ನೀಡುತ್ತಿದ್ದಾರೆ. ನಾಲ್ಕು ಐದು ಬಾರಿ ಶಾಸಕರಾದವರೆಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ. ಪುಟ್ಟಣ್ಣ, ಬಾಬೂರಾವ್ ಚಿಂಚನಸೂರ್, ಗೋಪಾಲಕೃಷ್ಣ ಕೂಡ ಹಿಂದೆ ನಮ್ಮಿಂದ ಗೆದಿದ್ದರು. ಬದಲಾವಣೆಗೆ ಜನ ತೀರ್ಮಾನ ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಅನುಕೂಲ ಆಗಿಲ್ಲ. ಬೀದರ್ ನಿಂದ ಚಾಮರಾಜನಗರದ ತನಕ ಅನೇಕ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದರು.