ಪ್ರಯಾಗ್ರಾಜ್: ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಕ್ತಸಾಗರ ತುಂಬಿ ತುಳುಕಿದೆ. ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದವರ ಸಂಖ್ಯೆ ಇದೀಗ 10 ಕೋಟಿ ಮೈಲುಗಲ್ಲು ದಾಟಿದೆ. ಇದೀಗ ಮಹಾಕುಂಭಮೇಳದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಮತ್ತು ಇತರ ಸಚಿವ ಸಂಪುಟದ ಮಂತ್ರಿಗಳೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರು ಮಹಾ ಕುಂಭಮೇಳದ ಅಂಗವಾಗಿ ಪ್ರಯಾಗ್ರಾಜ್ನಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದರು. ನಂತರ ಎಲ್ಲ ಸಚಿವ ಸಂಪುಟದ ಸದಸ್ಯರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದಲ್ಲಿ ಪಾಲ್ಗೊಂಡರು. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದ್ದಾರೆ.
ಇನ್ನು ಸಭೆ ನಂತರ ಯೋಗಿ ಆದಿತ್ಯನಾಥ್ ಅವರು ಮಾತನಾಡಿದ್ದು, ಪ್ರಯಾಗ್ರಾಜ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸಲು ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿಪಡಿಸುತ್ತೇವೆ. ಅದರ ಅಂಗವಾಗಿ ಗಂಗಾ ಎಕ್ಸ್ಪ್ರೆಸ್ವೇ ವಿಸ್ತರಣೆಯನ್ನು ಕೈಗೊಳ್ಳಲಾಗುವುದು. ಪ್ರಯಾಗ್ರಾಜ್ ಅನ್ನು ಮಿರ್ಜಾಪುರ, ಭದೋಹಿ, ಕಾಶಿ, ಚಂದೌಲಿಗೆ ಸಂಪರ್ಕಿಸುತ್ತದೆ. ಅಂತಿಮವಾಗಿ ಗಾಜಿಪುರದ ಪೂರ್ವಾಂಚಲ ಎಕ್ಸ್ಪ್ರೆಸ್ ವೇಗೆ ಸಂಪರ್ಕಿಸುತ್ತದೆ ಎಂದರು.