ಬೆಂಗಳೂರು: ಗೃಹ ಕಚೇರಿ ಕೃಷ್ಣಾದಲ್ಲಿ ನಿನ್ನೆ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ನಾವು ಬಿಡುವುದಿಲ್ಲ. ಪಿಎಸ್ಐ ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ಎಂಬುದು ತಿಳಿಯುತ್ತದೆ.
ಪೊಲೀಸ್ ಇಲಾಖೆ ಘನತೆಯನ್ನು ನೀವು ಹಾಳು ಮಾಡಿದ್ದೀರಿ. ಇದನ್ನು ನಾವು ಸಹಿಸುವುದಿಲ್ಲ. ನಮ್ಮ ಸರ್ಕಾರದಲ್ಲಿ ಎಲ್ಲವೂ ಸ್ವಚ್ಛವಾಗಿರಬೇಕು. ಜನ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಿದ್ದಾರೆ. ಅದರಂತೆ ಪೊಲೀಸ್ ಇಲಾಖೆಯಲ್ಲಿ ಬದಲಾವಣೆ ಆಗಬೇಕು. ನೀವು ಯಾರೂ ನಮಗೆ ಹಣ ಕೊಡುವುದು ಬೇಡ. ಉತ್ತಮವಾಗಿ ಕೆಲಸ ಮಾಡಿದರೆ ಸಾಕು ಎಂದು ಹಿರಿಯ ಪೊಲೀಸರಿಗೆ ಡಿಕೆ ಶಿವಕುಮಾರ್ ಖಡಕ್ ಸಂದೇಶ ರವಾನಿಸಿದರು.