ನನ್ನನ್ನು ಹತ್ಯೆ ಮಾಡಲು ಯತ್ನಿಸಿ ಹಿಜ್ಬುಲ್ಲಾ ಸಂಘಟನೆ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ತಮ್ಮ ಖಾಸಗಿ ನಿವಾಸದ ಮೇಲೆ ಹಿಜ್ಬುಲ್ಲಾ ನಡೆಸಿದ ಡ್ರೋನ್ ದಾಳಿಯ ಬಗ್ಗೆ ಕುರಿತು ನೆತನ್ಯಾಹು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ದಾಳಿ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನೆತನ್ಯಾಹು, ಹಿಜ್ಬುಲ್ಲಾ ಸಂಘಟನೆಯನ್ನು “ಇರಾನ್ ನ ಪ್ರಾಕ್ಸಿ” ಎಂದು ಉಲ್ಲೇಖಿಸಿದ್ದಾರೆ. ನನ್ನ ಮೇಲಿನ ಈ ಹತ್ಯೆ ಪ್ರಯತ್ನವು ನನ್ನನ್ನಾಗಲೀ ಅಥವಾ ಇಸ್ರೇಲ್ ಯುದ್ಧವನ್ನು ಮುಂದುವರೆಸುವುದನ್ನಾಗಲೀ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ನನ್ನನ್ನು ಮತ್ತು ನನ್ನ ಪತ್ನಿಯನ್ನ ಹತ್ಯೆ ಮಾಡಲು ಇರಾನ್ನ ಪ್ರಾಕ್ಸಿ ಹಿಜ್ಬುಲ್ಲಾ ನಡೆಸಿದ ಪ್ರಯತ್ನವು ಒಂದು ದೊಡ್ಡ ತಪ್ಪು. ಇದು ನಮ್ಮ ಭವಿಷ್ಯವನ್ನು ಭದ್ರಪಡಿಸುವ ಸಲುವಾಗಿ ನಮ್ಮ ಶತ್ರುಗಳ ವಿರುದ್ಧ ನಮ್ಮ ನ್ಯಾಯಯುತ ಯುದ್ಧವನ್ನು ಮುಂದುವರಿಸುವುದರಿಂದ ನನ್ನನ್ನಾಗಲೀ ಅಥವಾ ಇಸ್ರೇಲ್ ರಾಷ್ಟ್ರವನ್ನಾಗಲೀ ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆಯೇ ಏಕಾಏಕಿ ಡ್ರೋನ್ ದಾಳಿ ನಡೆದಿತ್ತು. ಆದರೆ, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಲೆಬನಾನ್ನಿಂದ ಈ ಡ್ರೋನ್ ದಾಳಿ ನಡೆದಿದ್ದು,ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಉಡಾಯಿಸಲಾಗಿದೆ. ಈ ವೇಳೆ ನೆತನ್ಯಾಹು ಮತ್ತು ಅವರ ಪತ್ನಿ ಸಾರಾ ಮನೆಯಲ್ಲಿ ಇರಲಿಲ್ಲ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಲೆಬನಾನ್ನಿಂದ ಹಾರಿಬಿಟ್ಟ ಡ್ರೋನ್ಗಳನ್ನು ಇಸ್ರೇಲ್ನ ವಾಯು ರಕ್ಷಣೆಯಾದ ಐರನ್ಡೋಮ್ ಹೊಡೆದು ಹಾಕಿದೆ. ಬಳಿಕ ರಾಜಧಾನಿ ಟೆಲ್ಅವಿವ್ನಲ್ಲಿ ಎಚ್ಚರಿಕೆ ಗಂಟೆ ಕೂಗಿಸಲಾಗಿದೆ. ಹೈಫಾ ಕೊಲ್ಲಿ ಪ್ರದೇಶದಲ್ಲೂ ರಾಕೆಟ್ಗಳು ಹಾರಿಬರುತ್ತಿರುವ ಕಾರಣ ಸೈರನ್ ಮೊಳಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.