ಮಂಡ್ಯ : ಕ್ಷೇತ್ರದ ಎಲ್ಲ ಧರ್ಮ, ಜಾತಿ – ಜನಾಂಗದವರು ತಮ್ಮನ್ನು ಚುನಾವಣೆಯಲ್ಲಿ ಪಕ್ಷಾತೀತವಾಗಿ ಬೆಂಬಲಿಸಿದ್ದು, ಈ ಗೆಲುವು ಕ್ಷೇತ್ರದ ಜನರ ಗೆಲುವಾಗಿದೆ. ನಿಮ್ಮ ಋಣವನ್ನು ನನ್ನ ಕೊನೆ ಉಸಿರಿರುವವರೆಗೆ ಮರೆಯಲ್ಲ ಎಂದು ಶಾಸಕ ಕೆ.ಎಂ.ಉದಯ್ ಭಾವುಕರಾದರು.
ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಬಳಿ ಭಾನುವಾರ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕಾಂಗ್ರೆಸ್ ಮುಖಂಡ ಸಿ.ಟಿ.ಶಂಕರ್ ನೇತೃತ್ವದಲ್ಲಿ ಶಾಸಕ ಕೆ.ಎಂ.ಉದಯ್ ಅವರ ಹುಟ್ಟು ಹಬ್ಬ ಆಚರಣೆ ಹಾಗೂ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆಯ ಅಂಗವಾಗಿ ಬೆಳ್ಳಿ ಕಿರೀಟ ತೊಡಿಸಿ ಅದ್ದೂರಿ ಸನ್ಮಾನಿಸಲಾಯಿತು.
ಬಳಿಕ ಬೃಹತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಾಸಕ ಕೆ.ಎಂ.ಉದಯ್ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕೋವಿಡ್ ನಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ನನ್ನ ಕೈಲಾದ ಮಟ್ಟಿಗೆ ಸಮಾಜಸೇವೆ ಮಾಡಬೇಕೆಂದು ಹೆಜ್ಜೆ ಇಟ್ಟಾಗ ನೀವೆಲ್ಲ ನನ್ನ ಸಮಾಜಮುಖಿ ಸೇವೆಗೆ ಬೆನ್ನೆಲುಬಾಗಿ ನಿಂತು ಬೆಂಬಲ ನೀಡಿದ್ದೀರಿ. ಬಳಿಕ ಸಮಾಜಸೇವೆ ಜೊತೆಗೆ ರಾಜಕೀಯದಲ್ಲೂ ಸ್ಥಾನ ಸಿಕ್ಕರೆ ಮತ್ತಷ್ಟು ಅಭಿವೃದ್ಧಿ ಮಾಡಬಹುದು ಎಂಬ ದೃಷ್ಟಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡ ತಂದು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವುದಕ್ಕೂ ಕಾರಣಕರ್ತರಾಗಿದ್ದಿರಿ. ನೀವು ನನ್ನ ಮೇಲೆ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದೀರಿ ಆ ನಿಮ್ಮ ನಂಬಿಕೆಯನ್ನು ಜೀವಮಾನದವರೆಗೆ ಹುಸಿ ಮಾಡಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಚುನಾವಣೆಗೆ ಮುನ್ನ ನೀಡಿದಂತ ಐದು ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆವರು ಜಾರಿಗೆ ತಂದಿದ್ದಾರೆ. ಆದರೆ, ವಿರೋಧ ಪಕ್ಷದ ನಾಯಕರು ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಸುವಂತ ದುರುದ್ದೇಶದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಜನತೆ ಧೃತಿಗೆಡಬೇಡಿ ಪ್ರತಿಯೊಂದು ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ತಲುಪಲಿವೆ ಎಂದು ತಿಳಿಸಿದರು.
ಮದ್ದೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕೆಂಬುದು ನನ್ನ ಆಸೆಯಾಗಿತ್ತು. ಆ ಕನಸನ್ನ ನನಸು ಮಾಡಲು ನೀವೆಲ್ಲ ನನಗೆ ಶಕ್ತಿ ನೀಡಿದ್ದಿರಿ ನಿಮ್ಮೆಲ್ಲರ ಮಾರ್ಗದರ್ಶನದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ.
ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಹಿಂದುಳಿದಿವೆ. ಇನ್ನು ಕೆಲ ದಿನಗಳಲ್ಲೆ ಪ್ರತಿ ಗ್ರಾಮಗಳಿಗೆ ಅಧಿಕಾರಿಗಳ ಜೊತೆಗೂಡಿ ಭೇಟಿ ನೀಡ್ತೆನೆ. ಎಲ್ಲಾ ಸಮಸ್ಯೆಗಳನ್ನೂ ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 6 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಖ್ಯಾತ ಹಿನ್ನೆಲೆಯಲ್ಲಿ ಗಾಯಕರಾದ ಹೇಮಂತ್ ಕುಮಾರ್, ಇಂದುನಾಗರಾಜ್, ಅನುರಾಧ ಭಟ್, ನವೀನ್ ಸಜ್ಜು, ಪುರುಷೋತ್ತಮ್, ಕಂಬದ ರಂಗಯ್ಯ, ಮಿಮಿಕ್ರಿ ಗೋಪಿ ಹಾಗೂ ಮತ್ತಿತರರು ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಸಾವಿರಾರು ಜನರ ಕಣ್ಮನ ಸೆಳೆಯಿತು.
ಇದೇ ವೇಳೆ ವಿನುತಾ ಉದಯ್, ಕಾಂಗ್ರೆಸ್ ಮುಖಂಡರಾದ ಸಿ.ಟಿ.ಶಂಕರ್, ಸಿಪಾಯಿ ಶ್ರೀನಿವಾಸ್, ಕೆ.ಎಂ.ರವಿಕುಮಾರ್, ಗ್ರಾ.ಪಂ ಸದಸ್ಯರಾದ ಮಧುಕುಮಾರ್, ತಿಮ್ಮೇಗೌಡ, ತಾ.ಪಂ ಮಾಜಿ ಸದಸ್ಯ ಚಲುವರಾಜು, ಮುಖಂಡರಾದ ತೈಲೂರು ರಘು, ದಿನೇಶ್ ಬಾಬು ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ