ಮಲಯಾಳಂ ಕಲಾವಿದ ನಿರ್ಮಲ್ ಬೆನ್ನಿ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕಳೆದ 12 ವರ್ಷಗಳಿಂದ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿರುವ ನಿರ್ಮಲ್ ಬೆನ್ನಿ ಐದು ಸಿನಿಮಾಗಳಲ್ಲಿ ನಟಿಸಿದ್ದರು. ಅತಿ ಸಣ್ಣ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಿರ್ಮಲ್ ಬೆನ್ನಿ ನಟನೆಯ ಮೊದಲ ಸಿನಿಮಾ ‘ನವಗತರ್ಕ್ ಸ್ವಾಗತಂ’. ನಿರ್ಮಲ್ ಅವರು ಲಿಜೋ ಜೋಸ್ ಪೆಲ್ಲಿಸೆರಿ ನಿರ್ದೇಶನದ ‘ಅಮೆನ್’ ಸಿನಿಮಾದಲ್ಲಿ ಕೊಚ್ಚನ್ ಹೆಸರಿನ ಪಾತ್ರ ಮಾಡಿದರು. ಈ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಗಮನ ಸೆಳೆದಿತ್ತು. ನಿರ್ಮಲ್ ಈವರೆಗೆ ಕೇವಲ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಿರ್ಮಲ್ ನಟನೆಯ ಜೊತೆಗೆ ಯೂಟ್ಯೂಬ್ ವಿಡಿಯೋಗಳ ಮೂಲಕ ಗಮನ ಸೆಳೆದಿದ್ದರು. ಸ್ಟೇಜ್ ಕಾರ್ಯಕ್ರಮಗಳನ್ನು ಅವರು ನೀಡಿದ್ದರು. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ನಿರ್ಮಾಪಕ ಸಂಜಯ್ ಪಡಿಯೂರ್ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ‘ಅಮೆನ್ ಸಿನಿಮಾದಲ್ಲಿ ಕೊಚ್ಚನ್ ಹಾಗೂ ದೂರಂ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ನಿರ್ಮಲ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತ ಆಯಿತು. ಗೆಳೆಯನೇ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಕೋರಿದ್ದಾರೆ.