ಮಾಲ್ಡೀವ್ಸ್: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿ ಕುರಿತು ಮಾಲ್ಡೀವ್ಸ್ ಸರ್ಕಾರದ ಮೂವರು ಸಚಿವರು ಲೇವಡಿ ಮಾಡಿದ್ದರು. ಲಕ್ಷದ್ವೀಪವನ್ನು ಮಾಲ್ಡೀವ್ಸ್ನಂತೆ ಮಾಡುತ್ತೀರಿ ಎಂಬುದು ನಿಮ್ಮ ಭ್ರಮೆ, ನಿಮ್ಮಲ್ಲಿ ಮಾಲ್ಡೀವ್ಸ್ನಲ್ಲಿರುವ ಮೂಲಸೌಕರ್ಯಗಳಿಲ್ಲ ಎಂದೆಲ್ಲಾ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ ಸರ್ಕಾರ ಈ ಸಚಿವರ ಹೇಳಿಕೆಗೂ ಸರ್ಕಾರಕ್ಕೂ ಏನು ಸಂಬಂಧವಿಲ್ಲ ಎಂದು ಹೇಳಿ, ಮರ್ಯಾಮ್ ಶಿಯುನಾ, ಮಲ್ಶಾ ಶರೀಫ್ ಮತ್ತು ಮಹಜೂಮ್ ಮಜೀದ್ ಅವರನ್ನು ನಂತರ ಅಮಾನತುಗೊಳಿಸಿದೆ.
ಇದೀಗ ಇದೇ ವಿಚಾರ ಕುರಿತು ಮಾಲ್ಡೀವ್ಸ್ ಸಂಸದೆ ಈವಾ ಅಬ್ದುಲ್ಲಾ ಮಾತನಾಡಿದ್ದಾರೆ, ಭಾರತೀಯರ ಕೋಪ ನ್ಯಾಯಯುತವಾಗಿದೆ, ಯಾರೂ ಕೂಡ ಇಂಥಾ ಹೇಳಿಕೆಯನ್ನು ಸಹಿಸುವುದಿಲ್ಲ, ಈ ಹೇಳಿಕೆಗಾಗಿ ನಾನು ಭಾರತೀಯರಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ. ಸಚಿವರ ಹೇಳಿಕೆ ಹೊರಬಿದ್ದ ತಕ್ಷಣವೇ ಭಾರತದಲ್ಲಿ #BoycottMaldives ಅಭಿಯಾನ ಶುರುವಾಗಿತ್ತು, ಸಾಕಷ್ಟು ಸೆಲೆಬ್ರಿಟಿಗಳು, ಕ್ರಿಕೆಟಿಗರು ಸೇರಿ ಸಾರ್ವಜನಿಕರು ಕೂಡ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಎಷ್ಟೋ ಮಂದಿ ಮಾಲ್ಡೀವ್ಸ್ಗೆ ಬುಕ್ ಮಾಡಿದ್ದ ವಿಮಾನ ಟಿಕೆಟ್ ಅನ್ನು ರದ್ದುಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಮಾಲ್ಡೀವ್ಸ್ಗೆ ತೆರಳುವ ಎಲ್ಲಾ ವಿಮಾನಗಳನ್ನು EaseMyTrip ರದ್ದುಗೊಳಿಸಿದೆ. ನಿಶಾಂತ್ ಪಿಟ್ಟಿ ಎಕ್ಸ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ EaseMyTrip ಎಲ್ಲಾ ಮಾಲ್ಡೀವ್ಸ್ ವಿಮಾನ ಬುಕಿಂಗ್ ಅನ್ನು ರದ್ದುಗೊಳಿಸಿದೆ, ಇದರೊಂದಿಗೆ EaseMyTrip #ChaloLakshadweep ಅಭಿಯಾನವನ್ನು ಪ್ರಾರಂಭಿಸಿದೆ ಎಂಬುದಾಗಿ ತಿಳಿಸಿದ್ದಾರೆ. ಲಕ್ಷದ್ವೀಪದ ನೀರು ಮತ್ತು ಕಡಲತೀರಗಳು ಮಾಲ್ಡೀವ್ಸ್ನಂತೆಯೇ ಉತ್ತಮವಾಗಿವೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಭೇಟಿ ನೀಡಿದ ಈ ತಾಣವನ್ನು ನಾವು ಮತ್ತಷ್ಟು ಪ್ರಚಾರ ಮಾಡಲಿದ್ದೇವೆ ಜತೆಗೆ ವಿಶೇಷ ಕೊಡುಗೆಯನ್ನೂ ಕೂಡ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.