ಜೈಪುರ: ಇಂದು ಸಾರ್ವಜನಿಕರಿಗೆ ಇವಿಎಂಗಳ (EVM) ಮೇಲೆ ನಂಬಿಕೆ ಇಲ್ಲದಂತಹ ಪರಿಸ್ಥಿತಿ ಬಂದಿದೆ. ಮೋದಿಯವರು (Narendra Modi) ಪೊಳ್ಳು ಜಗತ್ತಿನಲ್ಲಿ ಬದುಕುತ್ತಿದ್ದಾರೆ. ಸತ್ಯವನ್ನು ಮರೆಮಾಚಲು ದೊಡ್ಡ ಘಟನೆಗಳನ್ನು ತೋರಿಸಲಾಗಿದೆ ಎಂದು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ (Priyanka Gandhi Vadra) ವಾಗ್ದಾಳಿ ನಡೆಸಿದ್ದಾರೆ.
ರಾಜಸ್ಥಾನದ (Rajastan) ಜೈಪುರದಲ್ಲಿ ನಡೆದ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಎಲ್ಲ ವಿಪಕ್ಷಗಳ ಮೇಲೆ ದಾಳಿ ನಡೆಯುತ್ತಿದೆ. ಇಬ್ಬರು ಮುಖ್ಯಮಂತ್ರಿಗಳು ಜೈಲಿನಲ್ಲಿದ್ದಾರೆ. ಭ್ರಷ್ಟಾಚಾರದ ಮೇಲೆ ದಾಳಿ ನಡೆಸಿ ಭ್ರಷ್ಟರನ್ನು ತಮ್ಮ ಪಕ್ಷಗಳಿಗೆ ತೆಗೆದುಕೊಳ್ಳುತ್ತಿದ್ದಾರೆ. ಇಂದು ನೀವು ಹಾಕಲಿರುವ ಮತ ದೇಶದ ಪ್ರಜಾಪ್ರಭುತ್ವವನ್ನು ಉಳಿಸಲಿದೆ ಎಂದರು.
ಕಳೆದ 45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಬಾಧಿಸುತ್ತಿದೆ. ಬಿಜೆಪಿ ದೊಡ್ಡ ಭರವಸೆಗಳನ್ನು ನೀಡಿದ್ದರೂ ಒಂದನ್ನೂ ಈಡೇರಿಸಿಲ್ಲ. ಅಗ್ನಿವೀರ್ನಂತಹ ಯೋಜನೆಗಳನ್ನು ತಂದು ಮಕ್ಕಳ ಭರವಸೆಯನ್ನು ಛಿದ್ರಗೊಳಿಸಿದ್ದಾರೆ. ದೇಶದ ಎಲ್ಲೆಡೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುತ್ತಿವೆ. ಹಣದುಬ್ಬರದ ಪರಿಸ್ಥಿತಿ ಹೇಗಿದೆಯೆಂದರೆ ಚುನಾವಣೆ ಬರುವ ಎರಡು ತಿಂಗಳ ಮುಂಚೆ ಗ್ಯಾಸ್ ಸಿಲಿಂಡರ್ ಬೆಲೆ ಅಗ್ಗ ಮಾಡಲಾಗುತ್ತಿದೆ. ಹಾಗಿದ್ದರೆ ಇಷ್ಟು ವರ್ಷಗಳ ಕಾಲ ಇವರು ಏನು ಮಾಡುತ್ತಿದ್ದರು ಎಂದು ಹರಿಹಾಯ್ದರು.