ದೇಶದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾಗಿರುವ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಇಂದಿನ ಯುವಕರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ ಮಾತಿಗೆ ಪರ-ವಿರೋಧ ವ್ಯಕ್ತವಾಗಿತ್ತು. ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ, ಯಾವುದೇ ವಿಷಾದ ಇಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಖಾಸಗಿ ಮಾಧ್ಯವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಅವರು.. ನನ್ನ ಹೇಳಿಕೆ ಬಗ್ಗೆ ಯಾವುದೇ ವಿಷಾದ ಇಲ್ಲ.
70 ಗಂಟೆ ಮುಖ್ಯ ಎಂದು ಅವರು ಭಾವಿಸಿಲ್ಲ. ನನ್ನ ಹೇಳಿಕೆಯಲ್ಲಿ ನೀವು ತುಂಬಾ ಉತ್ಪಾದಕರಾಗಬೇಕು ಎಂದರ್ಥ. ಇದರೊಂದಿಗೆ ಸರ್ಕಾರದ ಸವಲತ್ತು ಪಡೆದವರು ಸಮಾಜದ ಒಳಿತಿಗಾಗಿ ಹೆಚ್ಚು ಶ್ರಮಿಸಬೇಕು ಎಂದು ಮತ್ತೆ ಒತ್ತಿ ಹೇಳಿದ್ದಾರೆ. ನಿವೃತ್ತಿಗೂ ಮೊದಲು ನಾನು ಪ್ರತಿ ವಾರ 85 ರಿಂದ 90 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೆ. 1961ರಲ್ಲಿ ಓದುತ್ತಿದ್ದಾಗ ಪೂರ್ವ ವಿವಿಯಿಂದ ನಾನು ಸ್ಕಾಲರ್ಶಿಪ್ ಪಡೆದು ಕೊಳ್ಳುತ್ತಿದೆ.
ಇಂಜಿನಿಯರ್ ಕಾಲೇಜಿನ ನನ್ನ ಬಹುತೇಕ ಸ್ನೇಹಿತರಿಗೆ ಶುಲ್ಕದ ವಿಚಾರದಲ್ಲಿ ಸರ್ಕಾರ ಭಾರೀ ರಿಯಾಯಿತಿ ಸಿಗುತ್ತಿತ್ತು. ಸರ್ಕಾರದಿಂದ ಲಾಭ ಪಡೆದವರು ದೇಶದಲ್ಲಿರುವ ಬಡವರ ಜೀವನ ಸುಧಾರಿಸಲು ಕೊಡುಗೆ ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಹೀಗಾಗಿ ನಾನು ಯಾವಾಗಲೂ ಅದನ್ನೇ ಅಭಿಪ್ರಾಯ ಪಡುತ್ತೇನೆ ಎಂದಿದ್ದಾರೆ. ನಮಗೆ ಕಠಿಣ ಪರಿಶ್ರಮ ಎಷ್ಟು ಮುಖ್ಯ ಎಂಬುದಕ್ಕೆ ಮಹಾತ್ಮ ಗಾಂಧಿ, ವಲ್ಲಭಭಾಯಿ ಪಟೇಲ್, ಜವಾಹರ ಲಾಲ್ ನೆಹರೂ, ಗೋಪಾಲಕೃಷ್ಣ ಗೋಖಲೆ,
ಮೌಲಾನ ಆಜಾದ್, ಸಿ. ರಾಜಗೋಪಾಲಚಾರಿ ಸೇರಿದಂತೆ ಅನೇಕ ನಾಯಕರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದಕ್ಕೆ, ದೇಶವನ್ನು ಸುಸ್ಥಿತಿ ಆಡಳಿತದಲ್ಲಿ ನಡೆಸುವುದಕ್ಕಾಗಿ ಹೆಚ್ಚಿನ ಸಮಯ ನೀಡುತ್ತಿದ್ದರು. ಇವರೆಲ್ಲರೂ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲು ಆಗುತ್ತಿರಲಿಲ್ಲ. ಈ ಮಹಾನ್ ನಾಯಕರು ಮಾಡಿದ ತ್ಯಾಗಕ್ಕೆ ಹೋಲಿಸಿದರೆ ನಮ್ಮದು ತೃಣಕ್ಕೆ ಸಮಾನವಾಗಿದೆ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.