ಬೆಂಗಳೂರು ;- ದೇಶದ ಉಳಿವಿಗಾಗಿ ಯುವಕರು ಎಚ್ಚೆತ್ತುಕೊಳ್ಳಿ ಎಂದು ಯುವ ಕಾಂಗ್ರೆಸ್ ನಾಯಕರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದ್ದಾರೆ.
ಭವಿಷ್ಯದ ನಾಯಕರನ್ನು ರೂಪಿಸಲು ಯುವ ಘಟಕಗಳು ಪ್ರಮುಖ ಪಾತ್ರ ವಹಿಸುತ್ತವೆ. ನಾನು ಕೂಡ ಪಂಚಾಯತಿ ಮಟ್ಟದಲ್ಲಿ ರಾಜಕೀಯ ಆರಂಭಿಸಿ, ಇಂದು ಕರ್ನಾಟಕದಲ್ಲಿ ಸಚಿವೆಯಾಗಿರುವೆ. ಎರಡು ಬಾರಿ ಚುನಾವಣೆಯಲ್ಲಿ ಸೋತರೂ ಎದೆಗುಂದದೇ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಇಂದು ಸಚಿವೆಯಾಗಿರುವೆ ಎಂದರು.
ಇನ್ನೂ ನಮ್ಮೆಲ್ಲರ ನಾಯಕ ಹಾಗೂ ಹಾಲಿ ಉಪ ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಜೈಲಿಗಟ್ಟಿದರೂ ಎದೆಗುಂದದೆ ಮುನ್ನಡೆದರು. ಅವರ ರಾಜ್ಯದ ಅಚ್ಚುಮೆಚ್ಚಿನ ನಾಯಕ ಸಿದ್ದರಾಮಯ್ಯ ಕೂಡಾ ಜತೆಗೂಡಿ ಪಕ್ಷ ಕಟ್ಟಿದ ಫಲವಾಗಿ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಅಧಿಕಾರ ಹಿಡಿದಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಯುವ ಸಮುದಾಯ ಎಂದರೆ ಭವಿಷ್ಯ ಎಂಬುದನ್ನು ಅರಿತ ಇಂದಿರಾ ಗಾಂಧಿ ಅವರು, ಭವಿಷ್ಯದ ನಾಯಕರ ನಿರ್ಮಾಣಕ್ಕೆ ಯುವ ಕಾಂಗ್ರೆಸ್ ಆರಂಭಿಸಿದರು. ಪರಿಣಾಮ ಯುವ ಕಾಂಗ್ರೆಸ್ನಿಂದ ಅನೇಕ ನಾಯಕರು ಬೆಳೆದು ಬಂದಿದ್ದಾರೆ. ರಾಜ್ಯದಲ್ಲಿ ನಾನು ಸೇರಿದಂತೆ ಅನೇಕ ನಾಯಕರು ಯುವ ಕಾಂಗ್ರೆಸ್ನಲ್ಲಿ ಪಳಗಿದವರು. ನಾಯಕತ್ವ, ಹೋರಾಟದ ಗುಣಗಳನ್ನು ಬೆಳೆಯಿಸಿಕೊಳ್ಳಲು ಯುವ ಕಾಂಗ್ರೆಸ್ ಗರಡಿ ಮನೆಯಂತೆ, ನೀವು ಆ ಗರಡಿ ಮನೆಯಲ್ಲಿ ಎಂತಹ ಪಟ್ಟುಗಳನ್ನು ಕಲಿಯುತ್ತೀರಿ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.