ಖ್ಯಾತ ಯೂಟ್ಯೂಬರ್ ಅಭ್ರದೀಪ್ ಸಹಾ ಅಲಿಯಾಸ್ ಆಂಗ್ರಿ ರಾಂಟ್ಮ್ಯಾನ್ ನಿಧನರಾಗಿದ್ದಾರೆ. ಕ್ರಿಕೆಟ್, ಫುಟ್ಬಾಲ್ ಕ್ರೀಡೆ ಹಾಗೂ ಸಿನಿಮಾ ವಿಶ್ಲೇಷಕರಾಗಿ ಕನ್ನಡಿಗರ ಮನ ಗೆದ್ದಿದ್ದ ಯುವ ಯೂಟ್ಯೂಬರ್ ಅಭ್ರದೀಪ್ ಸಾಹಾ ತಮ್ಮ 27ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ,
ಆಂಗ್ರಿ ರಾಂಟ್ಮ್ಯಾನ್, ಯಶ್ ನಟನೆಯ ‘ಕೆಜಿಎಫ್’ ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಯೂಟ್ಯೂಬ್ನಲ್ಲಿ 4.8 ಲಕ್ಷ ಫಾಲೋವರ್ಸ್ ಹೊಂದಿರುವ ರಾಂಟ್ ಮ್ಯಾನ್ ನಿಧನದ ಸುದ್ದಿ ಕೇಳಿ ಅನೇಕರು ಶಾಕ್ ಆಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಭ್ರದೀಪ್ ಸಾಹಾ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 16ರ ಮಧ್ಯರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಇತ್ತೀಚೆಗೆ ಸಾಹಾ ಅವರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಇತ್ತೀಚೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿರಲಿಲ್ಲ. ಜೊತೆಗೆ, ನಿಧಾನವಾಗಿ ಅವರಲ್ಲಿ ಬಹು ಅಂಗಾಂಗ ವೈಫಲ್ಯದ ಸಮಸ್ಯೆಯೂ ಕಾಣಿಸಿಕೊಂಡಿತ್ತು. ಹೀಗಾಗಿ ಮಗನ ಆರೋಗ್ಯದ ಬಗ್ಗೆ ಏ. 15ರಂದು ತಂದೆ ಟ್ವೀಟ್ ಮಾಡಿ, ಅಭ್ರದೀಪ್ ಅವರ ಆರೋಗ್ಯ ವಿಷಮ ಸ್ಥಿತಿಗೆ ತಲುಪಿದ್ದು, ಅಭಿಮಾನಿಗಳು ಅವರ ಚೇತರಿಕೆಗಾಗಿ ಪ್ರಾರ್ಥನೆ ಮಾಡಬೇಕಷ್ಟೇ ಎಂದು ಬರೆದುಕೊಂಡಿದ್ದರು. ಅದರೆ, ತಂದೆ ಟ್ವೀಟ್ ಮಾಡಿದ ಮರುದಿನವೇ ಸಾಹಾ ನಿಧನರಾಗಿದ್ದಾರೆ.
ರಾಜಕೀಯ, ಕ್ರಿಕೆಟ್, ಸಿನಿಮಾ, ತಿನಿಸುಗಳ ಬಗ್ಗೆ ರಿವ್ಯೂ ಹೇಳುವ ಮೂಲಕ ಅಭ್ರದೀಪ್ ಗಮನ ಸೆಳೆದಿದ್ದರು. ಅದರಕ್ಕೂ ಕೆಜಿಎಫ್ ಸಿನಿಮಾವನ್ನು ಕಿರುಚಾಡುತ್ತಲೇ ರಿವ್ಯೂ ಹೇಳಿದ್ದರು. ಯಶ್ ನಟನೆಯನ್ನು ಹಾಡಿಹೊಗಳಿದ್ದರು. ಆ ವಿಡಿಯೋ 17 ಲಕ್ಷ ವಿವ್ಸ್ ಪಡೆದಿತ್ತು. ಯೂಟ್ಯೂಬ್ನಲ್ಲಿ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದರು. ಕೇವಲ ಸಿನಿಮಾ ಮಾತ್ರವಲ್ಲದೇ ಫುಟ್ಬಾಲ್, ಕ್ರಿಕೆಟ್ ಪಂದ್ಯಗಳು, ಹಾಲಿವುಡ್ ಸಿನಮಾಗಳು ಸೇರಿದಂತೆ ಹಲವಾರು ರಂಗಗಳ ಬಗ್ಗೆ ವಿಶ್ಲೇಷಿಸುತ್ತಿದ್ದರು.