ಹೈದರಾಬಾದ್: ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ವೈಎಸ್ಆರ್ ತೆಲಂಗಾಣ ಪಕ್ಷದ (YSR Telangana Party) ನಾಯಕಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರ (Jagan Mohan Reddy) ಸಹೋದರಿ ವೈ.ಎಸ್ ಶರ್ಮಿಳಾ (Y.S Sharmila) ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ರಾಜ್ಯ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿರುವ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಎಸ್ಐಟಿ (SIT) ಕಚೇರಿಗೆ ತೆರಳುತ್ತಿದ್ದಾಗ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಶರ್ಮಿಳಾ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ನಡೆಸದಂತೆ ಮನವರಿಕೆ ಮಾಡಲು ತೆರಳಿದ ಪೊಲೀಸರ ಮೇಲೆ ಅವರು ಹಲ್ಲೆ ನಡೆಸಿದ್ದಾರೆ.
ತೆಲಂಗಾಣದಲ್ಲಿ ಸ್ವತಂತ್ರವಾಗಿ ರಾಜಕೀಯ ಗುರುತನ್ನು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಶರ್ಮಿಳಾ ಅವರು ನಿರಂತರವಾಗಿ ಪತ್ರಿಕೆ ಸೋರಿಕೆ ವಿಷಯವನ್ನು ಎತ್ತುತ್ತಿದ್ದಾರೆ. ಕಳೆದ ತಿಂಗಳು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಶರ್ಮಿಳಾ ಇತ್ತೀಚೆಗೆ ತೆಲಂಗಾಣದಾದ್ಯಂತ ಮೆರವಣಿಗೆ ನಡೆಸಿದ್ದರು. ಈ ವೇಳೆ ಆಂಧ್ರದಲ್ಲಿ ಅಧಿಕಾರದಲ್ಲಿರುವ ತನ್ನ ಸಹೋದರನ ವೈಎಸ್ಆರ್ ಕಾಂಗ್ರೆಸ್ (YSR Congress Party) ಪಕ್ಷಕ್ಕೂ ತನ್ನ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅವರು ಒತ್ತಿ ಹೇಳಿದ್ದರು.