‘ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಸಂಪೂರ್ಣವಾಗಿ ಕೊನೆಗೊಳಿಸಲು ನಾವು ಎರಡನೇ ಶಾಂತಿ ಶೃಂಗಸಭೆಯನ್ನು ಆಯೋಜಿಸಲು ಸಿದ್ಧರಿದ್ದೇವೆ. ಈ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಎಂದು ಭಾರತ ಸೇರಿದಂತೆ ಇತರ ದೇಶಗಳಿಗೆ ಈಗಾಗಲೇ ಆಹ್ವಾನವನ್ನೂ ನೀಡಿದ್ದೇವೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.
‘ರಷ್ಯಾ, ಯುದ್ಧವನ್ನು ನಿಲ್ಲಿಸಲು ಬಯಸಿದರೆ ಏನು ಮಾಡಬೇಕೆಂಬುದು ನಮಗೆಲ್ಲರಿಗೂ ತಿಳಿದಿದೆ. ಜಗತ್ತಿನಲ್ಲಿ ಹೊಸ ಬಣಗಳು, ಪ್ರಾದೇಶಿಕ ಗುಂಪುಗಳು ರಚನೆಯಾಗದೆ ಎಲ್ಲರೂ ಒಟ್ಟಾಗಿ ಸಾಗಬೇಕಿದೆ’ ಎಂದು ಉಕ್ರೇನ್ ಸಂಘರ್ಷದ ಕುರಿತಂತೆ ನಡೆದ ಭದ್ರತಾ ಮಂಡಳಿಯ ಸಭೆಯಲ್ಲಿ ಝೆಲೆನ್ಸ್ಕಿ ಹೇಳಿದ್ದಾರೆ.
‘ವಿಶ್ವಸಂಸ್ಥೆಯನ್ನು ಗೌರವಿಸುವ ಎಲ್ಲ ದೇಶಗಳನ್ನು ಈ ಶಾಂತಿ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಕೋರುವೆ. ಈಗಾಗಲೇ ಭಾರತವನ್ನು ಆಹ್ವಾನಿಸಿದ್ದೇವೆ. ಬ್ರೆಜಿಲ್, ಚೀನಾವನ್ನು ಆಹ್ವಾನಿಸುತ್ತೇವೆ. ಆಫ್ರಿಕನ್ ರಾಷ್ಟ್ರಗಳು, ಲ್ಯಾಟಿನ್ ಅಮೆರಿಕ, ಮಧ್ಯ ಪ್ರಾಚ್ಯ, ಮಧ್ಯ ಏಷ್ಯಾ, ಯುರೋಪ್, ಪೆಸಿಫಿಕ್ ಪ್ರದೇಶ ಹಾಗೂ ಉತ್ತರ ಅಮೆರಿಕದೊಂದಿಗೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ.
‘ಇದನ್ನು ಹೇಗೆ ಸಾಧಿಸಬೇಕು ಎಂಬುದು ನಮಗೆಲ್ಲರಿಗೂ ಗೊತ್ತಿದೆ. ನಮ್ಮಲ್ಲಿ ಶಾಂತಿ ಸೂತ್ರವಿದೆ. ವಿಶ್ವಸಂಸ್ಥೆಯ ಮಾರ್ಗಸೂಚಿಯಿದೆ. ಅದನ್ನು ಮಾಡಲು ಬೇಕಾದ ಶಕ್ತಿಯೂ ಇದೆ. ನಿರ್ಣಯ ಬೇಕಿದೆ’ ಎಂದು ಹೇಳಿದರು.