ಕೋಲಾರ: ಜಿಯಾನ್ ಹಿಲ್ಸ್ ಗಾಲ್ಫ್ ವಿಲ್ಲಾ ನನ್ನದಲ್ಲ, ಕಾರೂ ನನ್ನದಲ್ಲ. ಅಲ್ಲಿ ದೊರೆತಿರುವ ಕೋಟಿ ಕೋಟಿ ಹಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಚುನಾವಣೆ ಸಮಯದಲ್ಲಿ ಉದ್ದೇಶ ಪೂರ್ವಕವಾಗಿ ತೊಂದರೆ ಕೊಡಬೇಕು ಅಂತಲೇ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಅದನ್ನ ಕಾನೂನು ನೋಡಿಕೊಳ್ಳುತ್ತೆ ಎಂದು ವಿಲ್ಲಾದಲ್ಲಿ ದೊರೆತ 4.5 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾರಪೇಟೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಕೀಯ ಕುತಂತ್ರದಿಂದ ಪ್ರತೀ ಹಂತದಲ್ಲೂ ನನಗೆ ತೊಂದರೆ ಕೊಡ್ತಿದ್ದಾರೆ:
ಈಗಾಗಲೇ ಎರಡು ಬಾರಿ ಗೆದ್ದು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಆದ್ರೆ ಈಗ ಚುನಾವಣೆ ಸಮಯದಲ್ಲಿ ನನ್ನನ್ನು ಸೋಲಿಸಲು ಪಿತೂರಿ ಮಾಡುತ್ತಿದ್ದಾರೆ. ಇದಕ್ಕೆಲ್ಲ ನೇರ ಹೊಣೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್. ಪ್ರತಿ ಹಂತದಲ್ಲೂ ನನಗೆ ತೊಂದರೆ ಕೊಡುತ್ತಾ ಬರುತ್ತಿದ್ದಾರೆ. ಅವರು ಏನೇ ಆಪಾದನೆ ಮಾಡಿದರು ಸತ್ಯಕ್ಕೆ ದೂರ. ನನ್ನ ಪ್ರಚಾರತೆಯನ್ನ ಹಾಗೂ ಜನ ಬೆಂಬಲವನ್ನು ಸಹಿಸದೇ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ರಾಜಕೀಯ ಕುತಂತ್ರದಿಂದ ಎಫ್ಐಆರ್ ನಲ್ಲಿ ನನ್ನ ಹೆಸರು ಸೇರಿಸಿದ್ದಾರೆ. ಇದಕ್ಕೆ ಕಾನೂನು, ನನ್ನ ಕ್ಷೇತ್ರದ ಜನತೆ ಉತ್ತರ ಕೊಡುತ್ತಾರೆ.
ವಿಲ್ಲಾದಲ್ಲಿ ತಲದೊರೆತ ಕಾರನ್ನು 20 ದಿನಗಳ ಹಿಂದೆಯೇ ಮಾರಾಟ ಮಾಡಿದ್ದೇನೆ:
ಇನ್ನು ವಿಲ್ಲಾ ಬಳಿ ಸಿಕ್ಕ ಕಾರಿಗೆ ಈ ಹಿಂದೆ ಮಾಲೀಕನಾಗಿದ್ದೆ. ಆದರೆ ಆ ಕಾರು ಮಾರಾಟ ಮಾಡಿ 20 ದಿನಗಳಾಗಿದೆ. ಮಾರಾಟ ಮಾಡಿದ ಕಾರಿನ ಡಿಲೆವರಿ ನೋಟ್ ಸಹ ಪಡೆದುಕೊಂಡಿದ್ದೇನೆ. ಸಂಬಂಧಪಟ್ಟ ಇಲಾಖೆ ಕೇಳಿದಾಗ ಅದಕ್ಕೆ ಉತ್ತರ ನೀಡುತ್ತೇನೆ. ಎಫ್ಐಆರ್ ದಾಖಲಾದ ತಕ್ಷಣ ಅಪರಾಧಿಯಲ್ಲ, ಅದು ಕ್ರಿಮಿನಲ್ ಪ್ರಕರಣ ಸಹ ಅಲ್ಲ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಿಂಪಲ್ ಪಿಟಿಷನ್ ಅಷ್ಟೇ. ಜಸ್ಟ್ ಸ್ಟೇಷನ್ ಬೇಲ್ ಪ್ರಕರಣ, ಕ್ರಿಮಿನಲ್ ಪ್ರಕರಣ ಅಲ್ಲ. ನಾನು ಧೈರ್ಯವಾಗಿ ಚುನಾವಣೆ ಮಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ. ಈ ಹಿಂದೇನು ಮಾಡಿಲ್ಲ ಮುಂದೇನು ಮಾಡಲ್ಲ. ನನ್ನ ಕ್ಷೇತ್ರದ ಜನತೆ ಮುಖಂಡರು ಅಣ್ಣ ತಮ್ಮ ಮಗ ತಿಳ್ಕೊಂಡಿದ್ದಾರೆ ಇವರ ಶಕ್ತಿ ಮುಂದೆ ಯಾರೋ ಇಬ್ಬರು ಮೂರು ಮಂದಿ ಮಾಡೋದು ಯಾವ ಲೆಕ್ಕಕ್ಕೂ ಇಲ್ಲ ಎಂದು ಕ್ಷೇತ್ರದಲ್ಲಿ ಪ್ರಚಾರದ ವೇಳೆ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ಮತದಾರರಿಗೆ ಹಂಚಲು ತಂದಿದ್ದರು ಎನ್ನಲಾದ 4.5 ಕೋಟಿ ಹಣ ಪತ್ತೆ:
ಗುರುವಾರ ಕೆಜಿಎಫ್ ಎಸ್ಪಿ ಧರಣಿ ದೇವಿ ನೇತೃತ್ವದಲ್ಲಿ ಬಂಗಾರಪೇಟೆಯ ಜಿಯಾನ್ ಹಿಲ್ಸ್ ಗಾಲ್ಫ್ ನ ವಿಲ್ಲಾದ 279 ನಂಬರ್ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ಸುಮಾರು 4.50 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದರು. ಬಂಗಾರಪೇಟೆ ಕ್ಷೇತ್ರದ ಶಾಸಕ ಎಸ್.ಎನ್ ನಾರಾಯಣಸ್ವಾಮಿಗೆ ಸೇರಿದ ಹಣ ಎಂದು ತಿಳಿದು ಬಂದಿದೆ. ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳ ಮತದಾರರ ಪಟ್ಟಿ, ಶಾಸಕರ ಗ್ರಾಮವಾರು ಪ್ರವಾಸದ ಪಟ್ಟಿ ಹಾಗೂ ವಿವಿಧ ಗ್ರಾಮಗಳಿಗೆ ಹಣ ಹಂಚಿಕೆ ಮಾಡಿ ಬರೆದಿರುವ ಪಟ್ಟಿ ದೊರಕಿದೆ. ಇದು ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಹಣ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ಗುಂಟೂರು ನಿವಾಸಿ ಆಡಿಟರ್ ರಮೇಶ್ ಎಂಬುವರ ವಿಲ್ಲಾದಲ್ಲಿ 4.50ಕೋಟಿ ನಗದು ಹಣ ಪತ್ತೆಯಾಗಿದ್ದು ಆಡಿಟರ್ ರಮೇಶ್ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ.