ನಾವೆಲ್ಲ ಮನುಷ್ಯರು ಸತ್ತಾಗ ಅಂತ್ಯ ಸಂಸ್ಕಾರ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಮನುಷ್ಯರಂತೆ ಕತ್ತೆಗೆ ಅಂತ್ಯ ಸಂಸ್ಕಾರ ಮಾಡಿರುವ ಅಪರೂಪದ ಘಟನೆಯೊಂದು ಹೊಳಲ್ಕೆರೆ ತಾಲೂಕಿನ ಮದ್ದೇರು ಗ್ರಾಮದಲ್ಲಿ ಇಂದು ನಡೆದಿದೆ.
ಹೊಳಲ್ಕೆರೆ ತಾಲ್ಲೂಕಿನ ತಾಳ್ಯ ಹೋಬಳಿಯ ಮದ್ದೇರು ಗ್ರಾಮದ ಗ್ರಾಮಸ್ಥರು ತಮ್ಮ ಊರಿನ ಕತ್ತೆಯೊಂದು ಅಕಾಲಿಕವಾಗಿ ಸಾವಿಗೀಡಾಗಿದ್ದಕ್ಕೆ ಕಣ್ಣೀರು ಹಾಕಿ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಿ , ಇಡೀ ಊರಿಗೆ ಅನ್ನ ಸಂತರ್ಪಣೆ ಏರ್ಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಕೋರಿದ್ದಾರೆ.
ಹೌದು,, ಸಮೃದ್ಧ ಮಳೆ ಬೆಳೆಯಾಗಲಿ ಎಂದು ಗ್ರಾಮಸ್ಥರು ಸುಮಾರು ವರ್ಷಗಳಿಂದ ಕಪ್ಪೆ ಮತ್ತು ಕತ್ತೆಗೆ ಮದುವೆ ಮಾಡುತ್ತಿದ್ದರು. ಈ ರೀತಿ ಮದುವೆ ಮಾಡುವುದರಿಂದ ಸಮೃದ್ಧ ಮಳೆ ಬೆಳೆಯಾಗುತ್ತದೆ ಎಂಬುದು ಇಲ್ಲಿನ ಪ್ರತೀತಿ. ಈ ಹಿನ್ನೆಲೆಯಲ್ಲಿ ಪ್ರೀತಿಯಿಂದ ಸಾಕಿದ್ದ, ದೇವರಂತೆ ಕಾಣುತ್ತಿದ್ದ ಕತ್ತೆಯೂ ಇಂದು ಅಕಾಲಿಕ ಮರಣ ಹೊಂದಿದೆ. ವಿಷಯ ತಿಳಿದು ಗ್ರಾಮಸ್ಥರು ಮನುಷ್ಯರಿಗೆ ಯಾವ ರೀತಿ ಅಂತ್ಯಸಂಸ್ಕಾರ ಮಾಡುತ್ತೇವೆಯೋ ಅದೇ ರೀತಿ ಕತ್ತೆಗೆ ಅಂತ್ಯ ಸಂಸ್ಕಾರ ಮಾಡುವುದರ ಮುಖಾಂತರ ಕತ್ತೆ ಆತ್ಮಕ್ಕೆ ಮುಕ್ತಿ ನೀಡಿದ್ದಾರೆ.
ಇಂದು ಕತ್ತೆಯೂ ನಿಧನ ಹೊಂದಿದ ನಂತರ ಗ್ರಾಮದಲ್ಲಿ ಶಾಮಿಯಾನ ಹಾಕಿ ಕತ್ತೆಗೆ ಸ್ನಾನ ಮಾಡಿಸಿ, ಹೂವಿನ ಹಾರಗಳನ್ನು ಹಾಕಿ ವಿಶೇಷ ಪೂಜೆ ಸಲ್ಲಿಸಿ ಕೆಲ ಕಾಲ ಮೌನಚರಣೆ ಮಾಡಲಾಗಿದೆ. ನಂತರ ಗ್ರಾಮದ ಹೊರ ವಲಯದಲ್ಲಿರುವ ತೋಟವೊಂದರಲ್ಲಿ ಸ್ಮಶಾನಕ್ಕೆ ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಲಾಗಿದೆ. ನಂತರ ಸ್ಮಶಾನದಲ್ಲಿ ಗುಂಡಿಯನ್ನು ತೋಡಿ ಪೂಜೆ ಪುನಸ್ಕಾರದ ಜೊತೆಗೆ ಹಾಲು ತುಪ್ಪ ಹಾಕಿ, ಕತ್ತೆಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಆತ್ಮಕ್ಕೆ ಶಾಂತಿ ಕೋರಿ, ಅಂತ್ಯಸಂಸ್ಕಾರ ಮಾಡಿದ್ದಾರೆ.
ಒಟ್ಟಾರೆ ಹೆತ್ತ ತಂದೆ-ತಾಯಿಗಳನ್ನೇ ಮಕ್ಕಳು ನೋಡದಂತಹ ಪರಿಸ್ಥಿಯಲ್ಲಿ ಕೇವಲ ತಾವು ಪ್ರೀತಿಯಿಂದ ಸಾಕಿದ್ದ ಕತ್ತೆಗೆ ಅಂತ್ಯಸಂಸ್ಕಾರ ಮಾಡಿ ಸಾಕು ಪ್ರಾಣಿಯ ಮೇಲೆ ತಮಗೆ ಇರುವ ಪ್ರೀತಿ, ಕಾಳಜಿ, ಕರುಣೆಯನ್ನು ತೋರಿಸಿಕೊಟ್ಟಿದ್ದು, ಮಾನವೀಯ ಸಂಬಂಧಗಳಿಗೆ ಇರುವ ಬೆಲೆ ಏನು ಎಂಬುವುದಕ್ಕೆ ಈ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.