ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅತಿ ಹೆಚ್ಚು ಶತಕ ಗಳಿಸಲಿದ್ದಾರೆ. ಅಲ್ಲದೆ, ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದ್ದಾರೆಂದು ಮಾಜಿ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.
2011 ಮತ್ತು 2015ರ ವಿಶ್ವಕಪ್ ಟೂರ್ನಿಗಳಲ್ಲಿ ಆಟಗಾರನಾಗಿದ್ದ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ, 2019ರಲ್ಲಿ ತಂಡದ ಸಾರಥಿಯಾಗಿ ಸೆಮಿಫೈನಲ್ ಹಂತಕ್ಕೆ ತಲುಪಿಸಿದ್ದರು. ಅಲ್ಲದೆ ಸತತ 5 ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಅರ್ಧಶತಕಗಳನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದರು.
ಕ್ರಿಕ್ಬಜ್ ಜೊತೆ ಮಾತನಾಡಿದ ವಿಶ್ವಕಪ್ ವಿಜೇತ ಆಟಗಾರ ವೀರೇಂದ್ರ ಸೆಹ್ವಾಗ್, 2023ರ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ಶತಕ ಹಾಗೂ ರನ್ ಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ವಿಶ್ವಕಪ್ ಗೆಲ್ಲಲು ಸರ್ವಶ್ರೇಷ್ಠ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅರ್ಹರಾಗಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ರೋಹಿತ್ 2011ರ ವಿಶ್ವಕಪ್ ಟೂರ್ನಿಗೆ ಆಯ್ಕೆಗೆ ಹತ್ತಿರವಾಗಿದ್ದರು. ರೋಹಿತ್ ಅದ್ಭುತ ಆಟಗಾರರಾಗಿದ್ದು, ಟ್ರೋಫಿ ಗೆಲ್ಲಲು ಅರ್ಹರಾಗಿದ್ದಾರೆ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಹೇಳಿದ್ದಾರೆ.