2024ರ ಮೂರು ತಿಂಗಳು ಮುಕ್ತಾಯದ ಹಂತದಲ್ಲಿದೆ..! ಸೋತಿದ್ಯಾರು..? ಗೆದ್ದಿದ್ಯಾರು..? ಅಲ್ಪಸ್ವಲ್ಪ ಪ್ರೇಕ್ಷಕರ ಪ್ರೀತಿ ಗಳಿಸಿದ್ಯಾರು..? ಭಾರೀ ನಿರೀಕ್ಷೆ ಮೂಡಿಸಿ ಮನೆಗೆ ಹೋಗಿದ್ಯಾರು..? ಇತ್ಯಾದಿ ರಾಶಿ ರಾಶಿ ಪ್ರಶ್ನೆಗಳು ಗಾಂಧಿನಗರದ ಸರ್ಕಲ್ನಲ್ಲಿ ತಲೆಎತ್ತಿವೆ..! ಕನ್ನಡ ಪ್ರೇಕ್ಷಕ ದೇವರು ಸಿನಿಮಾ ನೋಡೊದನ್ನೇ ಬಿಟ್ಟುಬಿಟ್ನಾ..? ಯಾವ ಸಿನಿಮಾ ಎಂದು ರಿಲೀಸ್ ಅನ್ನೋದೆ ಆಡಿಯನ್ಸ್ ಗೆ ಗೊತ್ತಾಗ್ತಿಲ್ವಾ..? ಒಳ್ಳೆ ಸಿನಿಮಾಗಳನ್ನ ಪ್ರೇಕ್ಷಕರು ಕೈ ಬಿಡಲ್ಲ ಎಂಬ ಅಂದಿನ ಮಾತು ನಿಧಾನವಾಗಿ ಮರೆಯಾಗ್ತಿದೆಯಾ..? ಅಥವಾ ಓಟಿಟಿಯಲ್ಲೇ ಬರಲಿ..! ಆಮೇಲೆ ಕನ್ನಡ ಸಿನಿಮಾಗಳನ್ನ ಥಿಯೆಟರ್ಗಳಲ್ಲಿ ನೋಡೊಣ ಎಂಬ ಉಡಾಫೆ ಜಾಸ್ತಿಯಾಯ್ತಾ..? ಉತ್ತರ ಬಹಳ ಖಾರವಾಗಿದೆ. ಸಿನಿಮಾಪ್ರೇಮಿಗಳಿಗೆ ಅರಗಿಸಿಕೊಳ್ಳೊಕೆ ಕಷ್ಟವಾಗ್ತಿದೆ..!
2024 ಕನ್ನಡ ಚಿತ್ರರಂಗದ ಪಾಲಿಗೆ ನೇರವಾಗಿ ಕಹಿಯಾಗಿಲ್ಲ. ಒಳ್ಳೆ ಕಂಟೆಂಟ್ಗಳು ಬರೋದ್ರಲ್ಲಿ ಯಾವ ಕೊರತೆಯೂ ಉಂಟಾಗಿಲ್ಲ. ಹಾಗಿದ್ರೂ ಪ್ರೇಕ್ಷಕರು ಚಿತ್ರಮಂದಿರಗಳ ಅಡ್ರೆಸ್ ಯಾಕೆ ಮರೆತುಬಿಟ್ಟಿದ್ದಾರೆ ಎಂಬ ಪ್ರಶ್ನೆ ನಮ್ಮನ್ನೂ, ನಿಮ್ಮನ್ನೂ, ಇಡೀ ಚಿತ್ರರಂಗವನ್ನೂ ಕಾಡುತ್ತಲೇ ಇದೆ. ಈ ವರ್ಷದ ಮೊದಲ ಪೇಸ್ನಲ್ಲೇ 50ಕ್ಕೂ ಹೆಚ್ಚಿನ ಸಿನಿಮಾಗಳು ತೆರೆಗೆ ಅಪ್ಪಳಿಸಿದೆ. ಆದರೆ ಹಿಟ್ ಲಿಸ್ಟ್ ಮಾತ್ರ ತಣ್ಣಗಾಗಿಬಿಟ್ಟಿದೆ. ಹಾಗಂತ ಈ ಮೂರು ತಿಂಗಳು ಒಳ್ಳೆ ಸಿನಿಮಾಗಳು ಬರಲೇ ಇಲ್ವಾ..? ಕಥೆಗಳು ಪ್ರೇಕ್ಷಕರ ಮನಸ್ಸುಗಳನ್ನ ಕದಿಯಲೇ ಇಲ್ವಾ..? ಹೊಸಬರು ಸೌಂಡ್ ಮಾಡಲೇ ಇಲ್ವಾ..? ಪ್ರಶ್ನೆಗಳು ಕಠಿಣ..! ಉತ್ತರ ಮಾತ್ರ ನಿಗೂಢ ಎನ್ನುವಂತಾಗಿದೆ ನಮ್ಮ ಚಿತ್ರೋದ್ಯಮದ ಪರಿಸ್ಥಿತಿ.
‘ಕೆಜಿಎಫ್-2’ ಹಾಗೂ ‘ಕಾಂತಾರ’ ಬಳಿಕ ಅತ್ತ ವಲ್ಡ್ ಮ್ಯಾಪ್ನಲ್ಲಿ ಕನ್ನಡದ ಬಾವುಟ ಹಾರುತ್ತಿದೆ. ಕನ್ನಡ ಸಿನಿಮಾಗಳು ಅಂದ್ರೇ ಮೂಗು ಮುರಿಯುತ್ತಿದ್ದ ಕೆಲವು ಬುದ್ಧಿವಂತರಿಗೂ ಸ್ಯಾಂಡಲ್ವುಡ್ ಪವರ್ ಚೆನ್ನಾಗೇ ಗೊತ್ತಾಗಿದೆ. ಆದರೆ ಅದೇ ಅಲೆಯಲ್ಲಿ ಹೊಸ ಕಥೆಗಳಿಗೆ ಪ್ರೋತ್ಸಾಹ ಕೊಡೋದನ್ನ ನಾವು ಮರೆತುಬಿಟ್ವಾ ಎಂಬಂತಾಗಿದೆ. ಯಾಕಂದ್ರೆ ಈ 3 ತಿಂಗಳುಗಳಲ್ಲಿ ರಿಲೀಸ್ ಆದ ಗಟ್ಟಿ ಸಿನಿಮಾಗಳು ಪ್ರಚಾರದ ಕೊರತೆಯಿಂದಲೋ, ಥಿಯೆಟರ್ ಸಮಸ್ಯೆಯಿಂದಲೋ ನೆಲೆಯೂರೋಕೆ ಆಗಿಲ್ಲ. ಒಳ್ಳೆ ಪ್ರತಿಕ್ರಿಯೆಗಳು ಬಂದ್ರೂ ಅದು ಕೇವಲ ಸದಭಿರುಚಿಯ ‘ಕಪ್ ಅಫ್ ಟೀ’ ಎನಿಸುತ್ತಿದೆ. ಅವರವರ ಖುಷಿಗೆ ಫೇಸ್ಬುಕ್ ಹಾಗೂ ವಾಟ್ಸಪ್ನಲ್ಲಿ ಪುಟಗಟ್ಟಲೇ ಬರೆದರೂ, ಸಿನಿಮಾ ಟೇಕ್ ಆಫ್ ಆಗ್ತಿಲ್ಲ. ಬೇಸರವೇನೆಂದ್ರೇ ಆ ಸಿನಿಮಾ ಮಾಡಿರೋರ ಬಾಯಲ್ಲೇ ‘ಒಳ್ಳೆ ಸಿನಿಮಾ ಮಾಡೋದೆ ತಪ್ಪಾ ಸ್ವಾಮಿ’ ಎಂಬ ಹತಾಶೆಯ ಮಾತು ಹೊರಬಿದ್ದಿದೆ. ಕೋಟಿಗಟ್ಟಲೇ ದುಡ್ಡು ಹಾಕಿ, ಸಿನಿಮಾ ಮಾಡಿ, ಮೊದಲ ಶೋ ತುಂಬಿಸೋಕೆ ಇಷ್ಟೆಲ್ಲಾ ಯುದ್ಧ ಮಾಡಬೇಕಾ ಹೇಳಿ ಎಂಬ ಅನ್ನದಾತ ನಿರ್ಮಾಪಕನ ನಿಟ್ಟುಸಿರು ಹೊಸ ಆತಂಕಕ್ಕೆ ದಾರಿ ಮಾಡಿಕೊಡ್ತಿದೆ.
ಈ ವರ್ಷ ‘ಕಥೆಯೇ ಕಿಂಗ್’ ಎನ್ನುತ್ತಲೇ ಬ್ಲಿಂಕ್, ಶಾಖಾಹಾರಿ, ಕೆರೆಬೇಟೆ, ಸೋಮು ಸೌಂಡ್ ಇಂಜಿನಿಯರ್, ಫಾರ್ ರಿಜಿಸ್ಟ್ರೇಶನ್ ಸದ್ದು ಮಾಡಿವೆ. ಅದರಲ್ಲೂ ಹೋದವಾರವಷ್ಟೇ ರಿಲೀಸ್ ಆದ ಸಿನಿಮಾಗಳು ಉತ್ತಮ ಮನರಂಜನೆಯನ್ನ ಕೊಡೋಕೆ ಎಲ್ಲೂ ಎಡವಿ ಬಿದ್ದಿಲ್ಲ. ಬ್ಲಿಂಕ್, ಕೆರೆಬೇಟೆ ಹಾಗೂ ಸೋಮು ಸೌಂಡ್ ಇಂಜಿನಿಯರ್ ಚಿತ್ರಗಳ ಶೋಗಳ ಸಂಖ್ಯೆ ಕೊಂಚಮಟ್ಟಿಗೆ ಏರಿಕೆಯಾಗಿರೋದು ಚಿಕ್ಕ ಸಮಾಧಾನವೆನ್ನಬಹುದು. ‘ನೋಡಲೇಬೇಕಾದ ಚಿತ್ರಗಳು’ ಎಂಬ ಲೇಬಲ್ ಗಿಟ್ಟಿಸಿಕೊಳ್ಳುವಲ್ಲಿ ಈ ಚಿತ್ರಗಳು ಗೆದ್ದಿವೆ. ಆದರೆ ‘ಹೊಗಳಿಕೆ ಬೇರೆ, ಕಲೆಕ್ಷನ್ ಬೇರೆ’ ಎಂಬ ಕಹಿಸತ್ಯವನ್ನ ಈ ಎಲ್ಲಾ ಚಿತ್ರತಂಡಗಳು ಅನುಭವಿಸಿವೆ. ಹೀಗಾದ್ರೆ ಹೇಗೆ ಎಂಬ ಭವಿಷ್ಯದ ಅಭದ್ರತೆಯಂತೂ ಜಾಸ್ತಿಯಾಗಿದೆ. ಈ ಚಿತ್ರಗಳಿಗೆ ಸ್ಟಾರ್ಗಳು ಪರೋಕ್ಷವಾಗಿ ಬೆಂಬಲ ಸೂಚಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ರೂ ಪ್ರೇಕ್ಷಕರು ಮಾತ್ರ ಹೊಸ ಕನಸುಗಳಿಗೆ ಬಹುಪರಾಕ್ ಹೇಳ್ತಿಲ್ಲ. ಇನ್ಯಾವ ರೀತಿ ಸಿನಿಮಾ ಮಾಡಿದ್ರೆ ನಮ್ಮ ಸಿನಿಮಾ ಆಡಿಯನ್ಸ್ ಬರ್ತಾರೆ, ಸಿನಿಮಾ ಹಿಟ್ ಅಂತ ಅನಿಸಿಕೊಳ್ಳುತ್ತೆ ಎಂಬ ನೋವು ಮಾತ್ರ ಚಿತ್ರತಂಡಗಳಿಗೆ ಕಟ್ಟಿಟ್ಟ ಸಂಕಟದ ಬುತ್ತಿ.
‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾ ನೋಡಿದ ಕೆಲವು ಪ್ರೇಕ್ಷಕರು ಕಣ್ಣೀರಿಡುತ್ತಾ ಚಿತ್ರಮಂದಿರಗಳಿಂದ ಹೊರಬರುತ್ತಿದ್ದಾರೆ. ಆಚೆ ಇದ್ದ ಚಿತ್ರತಂಡವನ್ನ ತಬ್ಬಿಕೊಂಡು ಒಳ್ಳೆ ಸಿನಿಮಾ ಮಾಡಿದ್ದೀರಾ ಒಳ್ಳೆದಾಗಲಿ ಎನ್ನುತ್ತಿದ್ದಾರೆ. ‘ಬ್ಲಿಂಕ್’ ಚಿತ್ರವನ್ನ ನೀವು ನೋಡದೇ ಇದ್ರೆ ನಿಮಗೆ ಮೋಸ ಎಂಬ ವನ್ ಲೈನ್ ಅಭಿಪ್ರಾಯ ಎಲ್ಲೆಡೆ ಹರಿದಾಡುತ್ತಿದೆ. ‘ಕೆರೆಬೇಟೆ’ ಪ್ರಶಂಸೆಯ ದಾರಿಗೆ ಕಾಲಿಟ್ಟಾಗಿದೆ. ಸಿನಿಮಾ ತೇರು ಎಳೆಯಲು, ಪ್ರೇಕ್ಷಕರೇ ಪ್ರೀತಿಯ ಪೆಟ್ರೋಲ್ ಆಗಲೇಬೇಕು. ಶೋ ಇರೋ ಚಿತ್ರಮಂದಿರಗಳನ್ನ ಹುಡುಕಿಕೊಂಡಾದ್ರೂ ಒಳ್ಳೆ ಸಿನಿಮಾಗಳ ಕೈ ಹಿಡಿಯಲೇಬೇಕು..! ಚಿತ್ರೋದ್ಯಮ ಹೊಸಬರ ಚಿತ್ರಗಳಿಂದಲೂ ಉಸಿರಾಡಲೇಬೇಕು..!
-ಮಾವಳ್ಳಿ ಕಾರ್ತಿಕ್. ಫಿಲಂ ಡೆಸ್ಕ್. ಪ್ರಜಾಟಿವಿ