ಚುನಾವಣೆಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ರಾಜಕೀಯ ನೇತಾರರು ಮಾಡುವ ಚುನಾವಣಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗವು ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಅದೇ ಕ್ರಮಗಳನ್ನು ಕೇಂದ್ರ ಚುನಾವಣಾ ಆಯೋಗ ಅಳವಡಿಸಿದೆ.
ಪೊಲೀಸ್, ಆದಾಯ ತೆರಿಗೆ ಇಲಾಖೆ, ಜಿಲ್ಲಾಡಳಿತಗಳು, ಗುಪ್ತಚರ ಇಲಾಖೆ, ಕೇಂದ್ರೀಯ ಸಶಸ್ತ್ರ ಮೀಸಲು ಪಡೆ, ವಾಣಿಜ್ಯ ತೆರಿಗೆ ಇಲಾಖೆ, ಮಾದಕದ್ರವ್ಯ ನಿಯಂತ್ರಣ ಇಲಾಖೆ…. ಹೀಗೆ ವಿವಿಧ ವ್ಯವಸ್ಥೆಗಳನ್ನು ಬಳಸಿಕೊಂಡು ಚುನಾವಣಾ ಅಕ್ರಮಗಳನ್ನು ತಡೆಯಲು ಬಳಸಿಕೊಳ್ಳಲಾಗುತ್ತದೆ. ಅವುಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಕೂಡ ಒಂದು. ಇದನ್ನು ವಿಚಕ್ಷಣ ದಳವೆಂದು ಕರೆಯಬಹುದು. ಈ ಫ್ಲೈಯಿಂಗ್ ಸ್ಕ್ವಾಡ್ ನ ಸ್ವರೂಪವೇನು, ಇದು ಯಾವ ರೀತಿಯ ಪ್ರಕರಣಗಳನ್ನು ನಿಭಾಯಿಸುತ್ತದೆ ಹಾಗೂ ಇದರ ಕಾರ್ಯವೈಖರಿ ಹೇಗಿರುತ್ತೆ ಎಂಬ ಪ್ರಶ್ನೆಗಳಿಗೆ ಸಂಕ್ಷಿಪ್ತ ಉತ್ತರ ಇಲ್ಲಿದೆ.
ಫ್ಲೈಯಿಂಗ್ ಸ್ಕ್ವಾಡ್ ನ ಸ್ವರೂಪವೇನು?
ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ರೂಪಿಸಲಾಗುವ ಈ ತಂಡದಲ್ಲಿ ನುರಿತ ಪೊಲೀಸ್ ಅಧಿಕಾರಿಗಳು ಇರಲಿದ್ದಾರೆ. ಸಾಮಾನ್ಯವಾಗಿ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸ್ಕ್ವಾಡ್ ನ ನೇತೃತ್ವ ವಹಿಸಿರುತ್ತಾರೆ. ಇಲ್ಲವಾದರೆ ಹಿರಿಯ ಪೊಲೀಸ್ ಅಧಿಕಾರಿಯವರಿಗೆ ಈ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಈ ತಂಡದಲ್ಲಿ ಚುನಾವಣಾ ಆಯೋಗದ ಒಬ್ಬ ಅಧಿಕಾರಿಯಿರುತ್ತಾರೆ. ಇವರನ್ನು ಸೀಮಿತ ಅವಧಿಯವರೆಗೆ ಈ ತಂಡಕ್ಕೆ ವರ್ಗಾವಣೆ ಮಾಡಲಾಗಿರುತ್ತದೆ. ಇವರಿಗೆ ಒಂದು ಜಿಲ್ಲೆಯ ಜಿಲ್ಲಾಧಿಕಾರಿಗೆ ಇರುವಷ್ಟು ಅಧಿಕಾರವನ್ನು ಕೊಡಲಾಗಿರುತ್ತದೆ.
ಇನ್ನು, ಈ ತಂಡದಲ್ಲಿ ಪೊಲೀಸ್ ಪೇದೆಗಳು, ವಿಡಿಯೋಗ್ರಾಫರ್ ಗಳು ಇರುತ್ತಾರೆ. ಇವರು, ಚುನಾವಣಾ ನೀತಿ ಸಂಹಿತೆಯು ಜಾರಿಯಾದ ನಂತರ, ಫ್ಲೈಯಿಂಗ್ ಸ್ಕ್ವಾಡ್ ಗಳು ನಡೆಸುವ ಎಲ್ಲಾ ರೀತಿಯ ರೈಡ್ ಗಳನ್ನು, ಕಾರ್ಯಾಚರಣೆಗಳನ್ನು ದೈನಂದಿನ ಆಧಾರದಲ್ಲಿ ಚಿತ್ರೀಕರಣ ಮಾಡಿ, ಆ ವಿಡಿಯೋ ಫೂಟೇಜ್ ಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಎಂಥ ಪ್ರಕರಣಗಳನ್ನು ಈ ಸ್ಕ್ವಾಡ್ ನಿಭಾಯಿಸುತ್ತದೆ?
ಅಕ್ರಮ ಹಣ ಹಂಚಿಕೆ, ಉಚಿತ ಕೊಡುಗೆಗಳು, ಮತದಾರರಿಗೆ ಅಥವಾ ಅಭ್ಯರ್ಥಿಗಳಿಗೆ ಬೆದರಿಕೆ ಪ್ರಕರಣಗಳು, ರಾಜಕೀಯ ಪಕ್ಷಗಳಿಂದ ಅಥವಾ ಅಭ್ಯರ್ಥಿಗಳಿಂದ ಸಮಾಜ ಘಾತುಕ ಶಕ್ತಿಗಳ ಬಳಕೆ, ಸಮಾಜ ಘಾತುಕ ಶಕ್ತಿಗಳ ಚಟುವಿಟಿಕೆಗಳ ಮೇಲೆ ನಿಗಾ, ಮದ್ಯ ಸರಬರಾಜು, ಮದ್ದು-ಗುಂಡು- ಪಿಸ್ತೂಲುಗಳ ಹರಿದಾಟ – ಇವೇ ಮುಂತಾದ ಚಟುವಟಿಕೆಗಳ ಮೇಲೆ ಈ ತಂಡ ತೀವ್ರವಾಗಿ ನಿಗಾ ಇಡಲಿದೆ. ಇದಲ್ಲದೆ, ರಾಜಕೀಯ ಗಣ್ಯರ ಚುನಾವಣಾ ಬಹಿರಂಗ ಪ್ರಚಾರ, ರಾಜಕೀಯ ಸಭೆಗಳು, ಅವರು ಮಾಡುವ ಖರ್ಚು – ವೆಚ್ಚಗಳ ಮೇಲೂ ನಿಗಾ ಇಡಲಿದೆ.
ಕಾರ್ಯಾಚರಣೆ ಹೇಗೆ?
ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ಸಿಕ್ಕಲ್ಲಿ, ನಾಗರಿಕರಿಂದ ಅಥವಾ ರಾಜಕೀಯ ಪಕ್ಷಗಳಿಂದ ದೂರು ಸಲ್ಲಿಕೆಯಾದಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗುವ ಈ ತಂಡ, ತಕ್ಷಣವೇ ಈ ಕುರಿತ ಮಾಹಿತಿಯನ್ನು ಚುನಾವಣಾ ಖರ್ಚು ವೆಚ್ಚ ವಿಚಕ್ಷಣಾಧಿಕಾರಿಗೆ ವಿಚಾರ ತಿಳಿಸುತ್ತದೆ. ಚುನಾವಣಾ ಖರ್ಚು ವೆಚ್ಚಗಳ ಪರಿವೀಕ್ಷಕರಿಗೆ ನೋಡಲ್ ಅಧಿಕಾರಿಗಳೆಂದೂ ಕರೆಯಲಾಗುತ್ತದೆ. ಇವರು ತಮಗೆ ಫ್ಲೈಯಿಂಗ್ ಸ್ಕ್ವಾಡ್ ತಂಡವು ನೀಡಿದ ಮಾಹಿತಿಯನ್ನು, ಚುನಾವಣೆಗಾಗಿ ನೇಮಿಸಲಾಗಿರುವ ಆದಾಯ ತೆರಿಗೆ ಇಲಾಖೆಯ ಪ್ರಭಾರಿ ಅಧಿಕಾರಿಯವರಿಗೆ ತಿಳಿಸುತ್ತಾರೆ.
ಚುನಾವಣಾ ಅಕ್ರಮ ನಡೆಯುತ್ತಿರುವ ಜಾಗಕ್ಕೆ ತಕ್ಷಣವೇ ತೆರಳುವ ಫ್ಲೈಯಿಂಗ್ ಸ್ಕ್ವಾಡ್, ಅಲ್ಲಿ ನಡೆಯುತ್ತಿರುವ ಅಕ್ರಮಗಳ ಮಾಹಿತಿಯನ್ನು ಕಲೆಹಾಕಿ, ಆನಂತರ ತನ್ನನ್ನು ಸೇರಿಕೊಳ್ಳುವ ಆದಾಯ ತೆರಿಗೆ ಇಲಾಖೆಯ ತಂಡಕ್ಕೆ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ. ಈ ಕಾರ್ಯಾಚರಣೆಯನ್ನು ವೀಡಿಯೋಗ್ರಫಿ ಮಾಡಲು ಅವಕಾಶವಿರುತ್ತದೆ.
ಇಲ್ಲಿ ತಿಳಿಯಬೇಕಾದ ಮತ್ತೊಂದು ವಿಚಾರವೇನೆಂದರೆ, ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ತಂಡ ಬರುವವರೆಗೆ ಫ್ಲೈಯಿಂಗ್ ಸ್ಕ್ವಾಡ್ ನ ಯಾವುದೇ ಸದಸ್ಯರು ಅಕ್ರಮ ನಡೆಯುತ್ತಿರುವ ಜಾಗಕ್ಕೆ ನೇರವಾಗಿ ಹೋಗಿ ಕ್ರಮ ಕೈಗೊಳ್ಳುವಂತಿಲ್ಲ. ರೈಡ್ ಹಾಗೂ ಅಕ್ರಮ ಹಣ, ಆಮಿಷಗಳಿಗಾಗಿ ತರಲಾಗಿರುವ ವಸ್ತುಗಳನ್ನು ಜಪ್ತಿ ಮಾಡುವ ಅಧಿಕಾರ ಕೇವಲ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಮಾತ್ರವೇ ಇರುತ್ತದೆ. ಇವರಿಗೆ ಸಹಾಯಕರಾಗಿ ಫ್ಲೈಯಿಂಗ್ ಸ್ಕ್ವಾಡ್ ಕೆಲಸ ಮಾಡುತ್ತದೆ. ಇದಲ್ಲದೆ, ವಿವಿಧ ಜಿಲ್ಲೆಗಳು, ತಾಲೂಕುಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಚೆಕ್ ಪೋಸ್ಟ್ ಗಳ ಸಿಬ್ಬಂದಿಯ ಜೊತೆಗೂ ಫ್ಲೈಯಿಂಗ್ ಸ್ಕ್ವಾಡ್ ಕೆಲಸ ಮಾಡುತ್ತದೆ.
ವಿವಿಧ ತಂತ್ರಜ್ಞಾನಗಳ ಬಳಕೆ
ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಯು ತಾವು ಕಾರ್ಯಾಚರಣೆ ನಡೆಸುವ ಜಾಗಗಳನ್ನು ತಲುಪಲು ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾರೆ. ಜಿಪಿಎಸ್, ಸಿ-ವಿಜಿಲ್ ಮೊಬೈಲ್ ಆ್ಯಪ್, ಜಿಐಎಸ್ ತಂತ್ರಜ್ಞಾನಗಳನ್ನು ಬಳಸಿ ಅಕ್ರಮ ನಡೆಯುತ್ತಿರುವ ಜಾಗಕ್ಕೆ ಫ್ಲೈಯಿಂಗ್ ಸ್ಕ್ವಾಡ್ ಗಳು ಬೇಗನೇ ತಲುಪಲು ಸಹಾಯವಾಗುತ್ತದೆ.