ಬಾರ್ಬೆಡೊಸ್ (ವೆಸ್ಟ್ ಇಂಡೀಸ್): ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪೈಪೋಟಿ ನಡೆಸಲಿವೆ. ಪ್ರಥಮ ಒಡಿಐ ಇಲ್ಲಿನ ಬ್ರಿಡ್ಜ್ಟೌನ್ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಜುಲೈ 27ರಂದು (ಗುರುವಾರ) ನಡೆಯಲಿದ್ದು, ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆ ಎದುರಾಗಿದೆ. ಅನುಭವಿಗಳ ಅನುಪಸ್ಥಿತಿಯಲ್ಲಿ ಭಾರತ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಮುನ್ನಡೆಸಬೇಕಿತ್ತು. ಆದರೆ, ಆಟಗಾರರ ಮೇಲಿನ ಹೊರೆ ನಿರ್ವಹಣೆ ನಿಟ್ಟಿನಲ್ಲಿ ಸಿರಾಜ್ ಅವರಿಗೆ ವಿಂಡೀಸ್ ವಿರುದ್ಧದ ವೈಟ್ ಬಾಲ್ ಸರಣಿಯಿಂದ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
“ಮೊಹಮ್ಮದ್ ಸಿರಾಜ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಒಡಿಐ ಸರಣಿಗೂ ಮುನ್ನ ಭಾರತದ ಒಡಿಐ ತಂಡದಿಂದ ಬಿಡುಗಡೆ ಮಾಡಲಾಗಿದೆ. ಬಲಗೈ ವೇಗದ ಬೌಲರ್ ತಮ್ಮ ಬಲಗಾಲಿನ ಪಾದದಲ್ಲಿ ನೋವಿರುವುದಾಗಿ ಹೇಳಿದ್ದಾರೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಸ್ಥಿತಿಗತಿ ಬಗ್ಗೆ ಕಣ್ಣಿಟ್ಟಿದೆ,” ಎಂದು ಬಿಸಿಸಿಐ ಟ್ವೀಟರ್ ಮೂಲಕ ಮಾಹಿತಿ ನೀಡಿದೆ.
ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಗೌರವ ಪಡೆದ 29 ವರ್ಷದ ಮೊಹಮ್ಮದ್ ಸಿರಾಜ್, ಸದ್ಯ ಏಕದಿನ ಕ್ರಿಕೆಟ್ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಬ್ಬರಿಸಿದ್ದರೆ ಅಗ್ರಸ್ಥಾನ ಮರಳಿ ಪಡೆಯುವ ಎಲ್ಲ ಅವಕಾಶ ಸಿರಾಜ್ ಅವರಿಗಿತ್ತು. ಆದರೆ, ಮುಂಬರುವ ಏಷ್ಯಾ ಕಪ್ 2023 ಟೂರ್ನಿ ಮತ್ತು ಐಸಿಸಿ ಒಡಿಐ ವಿಶ್ವಕಪ್ 2023 ದೃಷ್ಟಿಯಲ್ಲಿ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ತನ್ನ ಸ್ಟಾರ್ ವೇಗಿಯ ಮೇಲಿನ ಆಟದ ಹೊರೆ ನಿಭಾಯಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಒಡಿಐ ಸರಣಿಯಿಂದ ಸಿರಾಜ್ ಅವರನ್ನು ಹೊರಗಿಡಲಾಗಿದೆ.