ಬಾಲಿವುಡ್ ನಟ ಅರ್ಷದ್ ವಾರ್ಸಿ ಇತ್ತೀಚೆಗೆ ತೆಲುಗು ಸ್ಟಾರ್ ನಟ ಪ್ರಭಾಸ್ ಅವರ ಅಭಿಮಾನಿಗಳ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ಮಾತನಾಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್ ಜೋಕರ್ ರೀತಿ ಕಾಣುತ್ತಾರೆ ಎಂದು ಅರ್ಷದ್ ವಾರ್ಸಿ ಹೇಳಿದ್ದು ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಇಡೀ ತೆಲುಗು ಸಿನಿಮಾ ಕಲಾವಿದರ ಸಂಘ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ಅರ್ಷದ್ ವಾರ್ಸಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ‘ಹಿಂದಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘ’ಕ್ಕೆ ತೆಲುಗು ಕಲಾವಿದರ ಸಂಘದಿಂದ ಪತ್ರ ಬರೆಯಲಾಗಿದೆ.
ತೆಲುಗು ಸಿನಿಮಾ ಕಲಾವಿದರ ಸಂಘದ ಅಧ್ಯಕ್ಷ ವಿಷ್ಣು ಮಂಜು ಅವರು ಈ ಪತ್ರ ಬರೆದಿದ್ದಾರೆ. ಹಿಂದಿ ಸಿನಿಮಾ ಮತ್ತು ಕಿರುತೆರೆ ಕಲಾವಿದರ ಸಂಘದ ಅಧ್ಯಕ್ಷೆ ಪೂನಂ ದಿಲೋನ್ ಅವರಿಗೆ ಪತ್ರವನ್ನು ಬರೆಯಲಾಗಿದೆ. ‘ತೆಲುಗು ಚಿತ್ರರಂಗಕ್ಕೆ ಸಂಬಂಧಿಸಿದಂತೆ ಇದು ಮುಖ್ಯ ವಿಚಾರವಾಗಿದೆ’ ಎಂದು ವಿಷ್ಣು ಮಂಚು ಅವರು ಪತ್ರ ಆರಂಭಿಸಿದ್ದಾರೆ. ಅದರ ಪ್ರತಿ ಕೂಡ ಮಾಧ್ಯಮಗಳಿಗೆ ಲಭ್ಯವಾಗಿದೆ.
‘ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಅರ್ಷದ್ ವಾರ್ಸಿ ಅವರು ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಮಾತನಾಡುವ ಹಕ್ಕು ಎಲ್ಲರಿಗೂ ಇದೆ ಎಂಬುದನ್ನು ನಾನು ಗೌರವಿಸುತ್ತೇವೆ. ಆದರೆ, ಅವರು ಪ್ರಭಾಸ್ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿದ್ದರ ಬಗ್ಗೆ ವಿಷಾದವಿದೆ. ತೆಲುಗು ಚಿತ್ರರಂಗದ ಅನೇಕರಿಗೆ ಮತ್ತು ಪ್ರಭಾಸ್ ಅವರ ಅಭಿಮಾನಿಗಳಿಗೆ ಈ ಹೇಳಿಕೆಯಿಂದ ನೋವಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.
‘ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಎಲ್ಲವೂ ವೇಗವಾಗಿ ಹಬ್ಬುತ್ತದೆ ಮತ್ತು ಚರ್ಚೆಗೆ ಕಾರಣವಾಗುತ್ತದೆ. ಸೆಲೆಬ್ರಿಟಿಗಳಾದ ನಾವು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಪದಗಳಿಗೆ ಶಕ್ತಿ ಇದೆ. ಅವು ಸಂಬಂಧವನ್ನು ಬೆಳೆಸಬಹುದು, ಮುರಿಯಲೂಬಹುದು. ಅರ್ಷದ್ ವಾರ್ಸಿ ಅವರ ಮಾತುಗಳಿಂದ ಅನಗತ್ಯವಾದ ನೆಗೆಟಿವಿಟಿ ಹಬ್ಬಿದೆ’ ಎಂದು ವಿಷ್ಣು ಮಂಚು ಅವರು ಬರೆದಿದ್ದಾರೆ.
‘ಮುಂದಿನ ದಿನಗಳಲ್ಲಿ ಯಾವುದೇ ಕಲಾವಿದರ ಬಗ್ಗೆ ಈ ರೀತಿ ಹೇಳಿಕೆ ನೀಡಬಾರದು ಎಂದು ಅರ್ಷದ್ ವಾರ್ಸಿ ಅವರಿಗೆ ತಿಳಿಸಿ. ಪ್ರದೇಶವಾರು ಭೇದ ಇಲ್ಲದೇ ನಾವು ಪರಸ್ಪರ ಗೌರವ ಹೊಂದಿರಬೇಕು. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರು. ನಮ್ಮ ಶಕ್ತಿಯೇ ಒಗ್ಗಟ್ಟು. ಅದನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.