ಕರಾಚಿ: ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಆಡಲು ಪಾಕಿಸ್ತಾನ ತಂಡಕ್ಕೆ ಅಲ್ಲಿನ ಸರ್ಕಾರದಿಂದ ಇನ್ನಷ್ಟೇ ಅನುಮತಿ ಸಿಗಬೇಕಿದ್ದು, ಅದಕ್ಕೂ ಮುನ್ನ ಪಾಕ್ ನಿಯೋಗ ಭಾರತದಲ್ಲಿ ಭದ್ರತಾ ವ್ಯವಸ್ಥೆ ಪರಿಶೀಲನೆಗೆ ಆಗಮಿಸಲಿದೆ. ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಶೀಘ್ರವೇ ನೂತನ ಮುಖ್ಯಸ್ಥರ ನೇಮಕವಾಗಲಿದ್ದು,
ಬಳಿಕ ಪಿಸಿಬಿ ಪ್ರತಿನಿಧಿಯನ್ನೊಳಗೊಂಡ ಭದ್ರತಾ ಅಧಿಕಾರಿಗಳ ನಿಯೋಗ ಭಾರತಕ್ಕೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಲಿದೆ. ಪಾಕ್ನ ಪಂದ್ಯ ನಡೆಯಲಿರುವ ಬೆಂಗಳೂರು, ಚೆನ್ನೈ, ಅಹಮದಾಬಾದ್, ಕೋಲ್ಕತಾ, ಹೈದರಾಬಾದ್ ಕ್ರೀಡಾಂಗಣಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಅವಲೋಕಿಸಿ, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸರ್ಕಾರ ವಿಶ್ವಕಪ್ಗೆ ಅನುಮತಿ ಬಗ್ಗೆ ನಿರ್ಧರಿಸಲಿದೆ.
ಪಾಕ್ ಮನವಿ ತಿರಸ್ಕೃತ
ಟೂರ್ನಿಯ ತನ್ನ ಕೆಲ ಪಂದ್ಯಗಳ ಸ್ಥಳ ಬದಲಾವಣೆ ಮಾಡುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಡಿದ್ದ ಮನವಿಯನ್ನು ಐಸಿಸಿ, ಬಿಸಿಸಿಐ ತಿರಸ್ಕರಿಸಿದೆ. ಅಹಮದಾಬಾದ್ ಜೊತೆಗೆ ಇತರ 4 ಕ್ರೀಡಾಂಗಣಗಳಲ್ಲೂ ಪಾಕ್ ತನ್ನ ಪಂದ್ಯಗಳನ್ನಾಡಲಿದೆ. ಈ ಪೈಕಿ ಆಸ್ಟ್ರೇಲಿಯಾ(ಅ.20) ಹಾಗೂ ನ್ಯೂಜಿಲೆಂಡ್(ನ.04) ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆಣಸಾಡಲಿದ್ದು, ಕೋಲ್ಕತಾ, ಹೈದರಾಬಾದ್, ಚೆನ್ನೈನಲ್ಲೂ ತಲಾ 2 ಪಂದ್ಯಗಳನ್ನಾಡಲಿದೆ.
ಟೂರ್ನಿ ಮಾದರಿ ಹೇಗೆ?: ಟೂರ್ನಿ ಕಳೆದ ಬಾರಿಯಂತೆ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಪ್ರತಿ ತಂಡ ಇತರ 9 ತಂಡಗಳ ವಿರುದ್ಧ ತಲಾ 1 ಬಾರಿ ಸೆಣಸಾಡಲಿದೆ. ಲೀಗ್ ಹಂತದ ಮುಕ್ತಾಯಕ್ಕೆ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಟೂರ್ನಿಯ 42 ಪಂದ್ಯಗಳು ಹಗಲು-ರಾತ್ರಿ ಹಾಗೂ ಇನ್ನುಳಿದ 6 ಪಂದ್ಯಗಳು ಹಗಲಿನಲ್ಲಿ ನಡೆಯಲಿವೆ. 2 ಪಂದ್ಯಗಳು ನಡೆಯಲಿರುವ ದಿನ ಮೊದಲ ಪಂದ್ಯ ಬೆಳಗ್ಗೆ 10.30ಕ್ಕೆ, 2ನೇ ಪಂದ್ಯ ಮಧ್ಯಾಹ್ನ 2ಕ್ಕೆ ಆರಂಭಗೊಳ್ಳಲಿದೆ. ಒಂದೇ ಪಂದ್ಯವಿರುವ ದಿನ ಪಂದ್ಯ ಮಧ್ಯಾಹ್ನ 2ಕ್ಕೆ ಶುರುವಾಗಲಿದೆ.