ಉತ್ತರ ಪ್ರದೇಶ, ಜನವರಿ 10: ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಹಿನ್ನೆಲೆಯಲ್ಲಿ ಜನವರಿ 22 ರಂದು ರಾಜ್ಯದಾದ್ಯಂತ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ. ಇಷ್ಟೇ ಅಲ್ಲ ಪ್ರಾಣ ಪ್ರತಿಷ್ಠೆ ದಿನ ಉತ್ತರ ಪ್ರದೇಶದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಮಹತ್ವದ ಆದೇಶವನ್ನು ಸಿಎಂ ಯೋಗಿ ಆದಿತ್ಯನಾಥ್ ಹೊರಡಿಸಿದ್ದಾರೆ. ಇದೇ ವೇಳೆ ಪ್ರಾಣಪ್ರತಿಷ್ಠೆಯ ಐತಿಹಾಸಿಕ ದಿನ ಶಾಂತಿಯುತವಾಗಿ ಸಂಭ್ರಮಿಸಲು ಮನವಿ ಮಾಡಿದ್ದಾರೆ. ಅಯೋಧ್ಯಾ ಧಾಮದಲ್ಲಿ ಕುತೂಹಲದಿಂದ ಕಾಯುತ್ತಿರುವ ಶ್ರೀರಾಮ ಲಲ್ಲಾನ ಹೊಸ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದ ಮಹತ್ವವನ್ನು ಪರಿಗಣಿಸಿ, ಸಿಎಂ ಜನವರಿ 22 ರಂದು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಸಂಭ್ರಮಿಸಲು ಕೆಲ ಸೂಚನೆ ನೀಡಲಾಗಿದೆ. ಶಾಂತಿಯುತವಾಗಿ ಸಂಭ್ರಮ ಆಚರಿಸಿ, ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮನೆಯಲ್ಲೇ ದೀಪ ಬೆಳಗಿ ರಾಮನ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ಪ್ರಾಣಪತಿಷ್ಠೆಯಲ್ಲಿ ಪಾಲ್ಗೊಳ್ಳಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಶಾಂತಿಯುತವಾಗಿ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಸಂಭ್ರಮದಲ್ಲಿ ಪಾಲ್ಗೊಳ್ಳಲು ಯೋಗಿ ಆದಿತ್ಯನಾಥ್ ಮನವಿ ಮಾಡಿದ್ದಾರೆ