ಭೋಪಾಲ್: ಸಾಫ್ಟ್ವೇರ್ ಇಂಜಿನಿಯರೊಬ್ಬ (Software Engineer) ಇಬ್ಬರನ್ನು ಮದುವೆಯಾಗಿದ್ದು, ಅವರಿಬ್ಬರೊಂದಿಗಿರಲು ಸಮಯವನ್ನು ನಿಗದಿ ಮಾಡಿ ಸುದ್ದಿಯಾಗಿದ್ದಾನೆ.
ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್ನಲ್ಲಿ 28 ವರ್ಷದ ಸಾಫ್ಟ್ವೇರ್ ಇಂಜಿನಿಯರೊಬ್ಬ 2 ಮದುವೆಯಾಗಿದ್ದ. ಆದರೆ ಇನ್ನೊಂದು ಮದುವೆ ಆಗಿರುವುದು ಮೊದಲ ಪತ್ನಿಗೆ ತಿಳಿದಿರಲಿಲ್ಲ. ತಿಳಿದ ನಂತರ ಕೋರ್ಟ್ಗೆ ಹೋಗಿದ್ದಾಳೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲ್ಯಾನ್ವೊಂದನ್ನು ಹುಡುಕಿದ್ದಾನೆ.
ಈ ಪ್ಲ್ಯಾನ್ನಂತೆ ತನ್ನ ಇಬ್ಬರು ಪತ್ನಿಯರನ್ನು ಒಟ್ಟಿಗೆ ಕೂರಿಸಿ ನಿರ್ಧಾರಕ್ಕೆ ಬಂದಿದ್ದಾನೆ. ಇದರ ಪ್ರಕಾರ ವಾರದಲ್ಲಿ 3 ದಿನ ಮೊದಲ ಪತ್ನಿಗಾದರೆ ಉಳಿದ ಮೂರು ದಿನ ಮತ್ತೋರ್ವ ಪತ್ನಿಯೊಂದಿಗೆ ಇರಲು ಸಮಯವನ್ನು ನಿಗದಿ ಮಾಡಿದ್ದಾನೆ. ಉಳಿದಂತೆ ಇನ್ನೊಂದು ದಿನ ಅಂದರೆ ಭಾನುವಾರ ತನ್ನಿಷ್ಟದಂತೆ ಸಮಯ ಕಳೆಯಲು ನಿರ್ಧರಿಸಿದ್ದು, ಇದಕ್ಕೆ ಆತನ ಪತ್ನಿಯರು ಒಪ್ಪಿಗೆ ಸೂಚಿಸಿದ್ದಾರೆ.
ಏನಿದು ಪ್ರಕರಣ?: 2008ರಲ್ಲಿ ವ್ಯಕ್ತಿಯು 26 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ಆ ವೇಳೆ ಆತ ಗುರುಗ್ರಾಮನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. 2 ವರ್ಷಗಳ ಕಾಲ ದಂಪತಿ ಇಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅವರಿಗೆ ಓರ್ವ ಮಗನು ಇದ್ದ. ಆದರೆ 2020ರಲ್ಲಿ ಕೊರೊನಾ ಪ್ರಾರಂಭವಾದಾಗಿನಿಂದ ದಂಪತಿ ವರ್ಕ್ ಫ್ರಂ ಹೋಮ್ನಿಂದಾಗಿ ಗ್ವಾಲಿಯರ್ಗೆ ಬಂದರು. ಅದಾದ ಕೆಲ ತಿಂಗಳ ನಂತರ ವ್ಯಕ್ತಿಯೊಬ್ಬನೇ ಗುರುಗ್ರಾಮ್ಗೆ ಹಿಂದಿರುಗಿದ.
ಗ್ವಾಲಿಯರ್ನಿಂದ ಗುರುಗ್ರಾಮಕ್ಕೆ ಪತ್ನಿಯು ಬರುತ್ತಿರುವುದಾಗಿ ಹೇಳಿದ್ದಾಳೆ. ಆ ವೇಳೆ 2021ರಲ್ಲೇ ಆ ಪತಿಗೆ ಅದೇ ಕಂಪನಿಯ ತನ್ನ ಸಹೋದ್ಯೋಗಿಯೊಂದಿಗೆ ಮದುವೆಯಾಗಿರುವುದು ಗೊತ್ತಾಗಿದೆ. ಅಷ್ಟೇ ಅಲ್ಲದೇ 2ನೇ ಪತ್ನಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.