ಕೆಲಸದ ಒತ್ತಡ(Stress) ಮತ್ತು ಸಮಸ್ಯೆಗಳು ತಲೆನೋವಿಗೆ(headache) ಕಾರಣವಾಗಬಹುದು. ಆದರೆ, ತಲೆನೋವು ಇತರ ಎಲ್ಲಾ ಕಾಯಿಲೆಗಳಿಗಿಂತ ಹೆಚ್ಚು ತೀವ್ರವಾಗಿರುತ್ತದೆ. ತಲೆನೋವು ಎಂದರೆ ಮನಸ್ಸು ಎಷ್ಟೇ ಪ್ರಶಾಂತವಾಗಿದ್ದರೂ ತಲೆ ನೋವಿನ ಕಾರಣದಿಂದ, ಕೋಪಗೊಂಡು ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ ಸದ್ದು ಸಹಿಸಲಾಗುವುದಿಲ್ಲ. ಕಣ್ಣುಗಳು ಕತ್ತಲಾಗುತ್ತಿರುವಂತೆ ಭಾಸವಾಗುತ್ತಿದೆ. ಇವೆಲ್ಲವು ತಲೆನೋವಿನ ಲಕ್ಷಣಗಳಾಗಿವೆ. ಪ್ರಯಾಣ ಮಾಡುವುದಾಗಲಿ,
ಬಿಸಿಲಿನಲ್ಲಿ ಹೆಚ್ಚು ಪ್ರಯಾಣ ಮಾಡುವುದಾಗಲಿ, ತಡವಾಗಿ ಊಟ ಮಾಡುವುದಾಗಲಿ ಅಥವಾ ಊಟವನ್ನೇ ಮಾಡದಿರುವಾಗಲಿ, ಕಡಿಮೆ ಅಥವಾ ಹೆಚ್ಚು ನಿದ್ದೆ ಮಾಡಿದರೆ, ಇಂತಹ ಎಲ್ಲಾ ಸಂದರ್ಭಗಳಲ್ಲಿ ಈ ರೀತಿಯ ತಲೆನೋವು ಬರಬಹುದು. ಕೆಲವು ಕುಟುಂಬಗಳಲ್ಲಿ ವಂಶಪಾರಂಪರ್ಯವಾಗಿಯೂ ತಲೆನೋವು ಬರುತ್ತದೆ. ಇತ್ತೀಚಿನ ದಿನಗಳಲ್ಲಿ, ಕೆಲಸದ ಒತ್ತಡ, ಉದ್ವೇಗ, ನಿದ್ರೆಯ ಸಮಸ್ಯೆಗಳು ಮತ್ತು ವಂಶವಾಹಿ ಸಮಸ್ಯೆಗಳಂತಹ ಹಲವಾರು ಕಾರಣಗಳಿಂದ ತಲೆನೋವು ನಮ್ಮನ್ನು ಕಾಡುತ್ತಿದೆ. ಕೆಲವು ವಿಧಾನಗಳನ್ನು ಅನುಸರಿಸುವ ಮೂಲಕ(Home remedies) ತಲೆನೋವಿನಿಂದ ಪರಿಹಾರ ಪಡೆಯಬಹುದು.
ನೀರನ್ನು ಹೆಚ್ಚು ಕುಡಿಯಿರಿ
ನೀರನ್ನು ಕಡಿಮೆ ಕುಡಿಯುವುದು ಅಥವಾ ದೇಹದಲ್ಲಿ ನೀರು ಕಡಿಮೆಯಾದರೆ ನಿಮಗೆ ತಲೆನೋವು ಸಮಸ್ಯೆ ಕಾಣಿಸಬಹುದು. ವಾಸ್ತವವಾಗಿ, ದೀರ್ಘಕಾಲದ ನಿರ್ಜಲೀಕರಣವು ಒತ್ತಡದ ತಲೆನೋವು ಮತ್ತು ಮೈಗ್ರೇನ್‌ಗಳಿಗೆ ಸಾಮಾನ್ಯ ಕಾರಣವಾಗಿದೆ ಎಂದು ಅಧ್ಯಯನಗಳು ತೋರಿಸಿವೆ ಅದೃಷ್ಟವಶಾತ್, ನೀರು ಕಡಿಮೆ ಆಗಿ ಉಂಟಾಗುವ ತಲೆ ನೋವು 30 ನಿಮಿಷಗಳಿಂದ ಮೂರು ಗಂಟೆಗಳ ಒಳಗೆ ಕಡಿಮೆಯಾಗುತ್ತದೆ.ನಿರ್ಜಲೀಕರಣವು ಏಕಾಗ್ರತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ನಿರ್ಜಲೀಕರಣದ ತಲೆನೋವಿನಿಂದ ಪರಿಹಾರ ಪಡೆಯಲು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು ಮತ್ತು ನೀರು-ಭರಿತ ಆಹಾರವನ್ನು ಸೇವಿಸುವುದು ಬಹಳ ಮುಖ್ಯವಾಗುತ್ತದೆ.
ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿ
ಆಲ್ಕೊಹಾಲ್ಯುಕ್ತ ಪಾನೀಯವು ಹೆಚ್ಚಿನ ಜನರಲ್ಲಿ ತಲೆನೋವು ಉಂಟುಮಾಡದಿದ್ದರೂ, ಆಗಾಗ್ಗೆ ತಲೆನೋವು ಅನುಭವಿಸುವವರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಮದ್ಯವು ಮೈಗ್ರೇನ್ಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ. ಆಲ್ಕೋಹಾಲ್ ಅನೇಕ ಜನರಲ್ಲಿ ಒತ್ತಡ ಮತ್ತು ಕ್ಲಸ್ಟರ್ ತಲೆನೋವುಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ವಾಸೋಡಿಲೇಷನ್ ಕೆಲವು ಜನರಲ್ಲಿ ತಲೆನೋವು ಉಂಟು ಮಾಡಬಹುದು. ಆಲ್ಕೋಹಾಲ್ ಮೂತ್ರವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ, ಆಗಾಗ್ಗೆ ಮೂತ್ರ ವಿಸರ್ಜನೆಯ ಮೂಲಕ ದೇಹವು ದ್ರವ ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಕಳೆದುಕೊಳ್ಳುತ್ತದೆ. ಈ ದ್ರವದ ನಷ್ಟವು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಇದು ತಲೆನೋವು ಉಂಟುಮಾಡಬಹುದು.
ಸರಿಯಾಗಿ ನಿದ್ರೆ ಮಾಡಿ
ನಿದ್ರಾಹೀನತೆಯು ನಿಮ್ಮ ಆರೋಗ್ಯಕ್ಕೆ ಅನೇಕ ವಿಧಗಳಲ್ಲಿ ಹಾನಿಕಾರಕವಾಗಬಹುದು ಮತ್ತು ಕೆಲವು ಜನರಲ್ಲಿ ತಲೆನೋವು ಉಂಟುಮಾಡುತ್ತದೆ. ಕಡಿಮೆ ನಿದ್ರೆ ಮಾಡಿದವರಲ್ಲಿ ತಲೆ ನೋವು ಪದೇ ಪದೇ ಕಾಣಿಸಿಕೊಳ್ಳುತ್ತದೆ. ಹಾಗಂತ ಹೆಚ್ಚು ನಿದ್ರೆಯನ್ನು ಸಹ ಮಾಡಬಾರದು. ಅದು ಕೂಡ ತಲೆ ನೋವಿಗೆ ಕಾರಣವಾಗುತ್ತದೆ. ನೈಸರ್ಗಿಕ ತಲೆನೋವಿಗೆ ಪರಿಹಾರ ಪಡೆಯಲು ಪ್ರಯತ್ನಿಸುತ್ತಿರುವವರಿಗೆ ಸರಿಯಾದ ಪ್ರಮಾಣದ ವಿಶ್ರಾಂತಿಯನ್ನು ಪಡೆಯುವುದು ಮುಖ್ಯವಾಗಿದೆ. ಪ್ರತಿದಿನ 7 ರಿಂದ 8 ಗಂಟೆಗಳ ನಿದ್ರೆ ಅವಶ್ಯಕವಾಗಿದ್ದು, ನಿಮ್ಮ ತಲೆನೋವು ನಿವಾರಿಸಲು ಸಹಕಾರಿಯಾಗಿದೆ.
ಸಾರಭೂತ ತೈಲಗಳನ್ನು ಬಳಸಿ
ಸಾರಭೂತ ತೈಲಗಳು ವಿವಿಧ ಸಸ್ಯಗಳಿಂದ ಆರೊಮ್ಯಾಟಿಕ್ ಸಂಯುಕ್ತಗಳನ್ನು ಒಳಗೊಂಡಿರುವ ಎಣ್ಣೆಗಳಾಗಿದ್ದು ತಲೆನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಈ ಎಣ್ಣೆಗಳು ಅನೇಕ ಚಿಕಿತ್ಸಕ ಪ್ರಯೋಜನಗಳನ್ನು ಹೊಂದಿವೆ ಮತ್ತು ಹೆಚ್ಚಾಗಿ ಬಳಕೆಯಲ್ಲಿವೆ. ಕೆಲವೊಂದು ಎಣ್ಣೆಗಳನ್ನು ಸೇವನೆ ಕೂಡ ಮಾಡಬಹುದು. ನೀವು ತಲೆನೋವಿನಿಂದ ಪರದಾಡುತ್ತಿದ್ದರೆ ಪುದೀನಾ ಮತ್ತು ಲ್ಯಾವೆಂಡರ್ ಸಾರಭೂತ ತೈಲಗಳು ವಿಶೇಷವಾಗಿ ಸಹಾಯಕ ಎನ್ನಲಾಗುತ್ತದೆ. ಪುದೀನಾ ಸಾರಭೂತ ತೈಲವನ್ನು ನೆತ್ತಿಯ ಬುಡಕ್ಕೆ ಮತ್ತು ಸ್ವಲ್ಪ ಹಣೆಗೆ ಹಚ್ಚುವುದರಿಂದ ಒತ್ತಡದಿಂದ ಉಂಟಾಗುವ ತಲೆನೋವಿನ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.