ನವದೆಹಲಿ: ಭೋಪಾಲ್ ಅನಿಲ ದುರಂತ ಪ್ರಕರಣದ (Bhopal Gas Tragedy) ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ (compensation) ಕೋರಿ ಸಲ್ಲಿಸಿದ್ದ ಅರ್ಜಿಯಲ್ಲಿ ಕೇಂದ್ರಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ವಜಾಗೊಳಿಸಿದೆ.
ಭೋಪಾಲ್ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ 1984ರಲ್ಲಿ ವಿಷಕಾರಿ ಮೀಥೈಲ್ ಐಸೊಸೈನೇಟ್ ಅನಿಲ ಸೋರಿಕೆಯಾಗಿತ್ತು. ಈ ಅನಿಲ ದುರಂತದಲ್ಲಿ 3,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ದುರಂತ ವಿಶ್ವದ ಅತ್ಯಂತ ಕೆಟ್ಟ ಕೈಗಾರಿಕಾ ವಿಪತ್ತುಗಳಲ್ಲಿ ಒಂದಾಗಿತ್ತು.
ಈ ಪ್ರಕರಣವನ್ನು ಮತ್ತೆ ತೆರೆಯಬೇಕು. ಅನಿಲ ಸೋರಿಕೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಹೆಚ್ಚುವರಿಯಾಗಿ 7,844 ಕೋಟಿ ರೂ.ವನ್ನು ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ನ ಉತ್ತರಾಧಿಕಾರಿ ಸಂಸ್ಥೆಗಳು ನೀಡಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್ನ ಮೊರೆ ಹೋಗಿತ್ತು. ಅಷ್ಟೇ ಅಲ್ಲದೇ ಅನಿಲ ದುರಂತದಿಂದ ಜೀವ ಹಾನಿ ಮತ್ತು ಪರಿಸರಕ್ಕೆ ಅಗಾಧ ಪ್ರಮಾಣದಲ್ಲಿ ಹಾನಿ ಉಂಟಾಗಿದೆ ಎಂದು ವಾದಿಸಿತ್ತು.
ಪ್ರಕರಣವನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ನಾಥ್ ಮತ್ತು ಜೆ.ಕೆ ಮಹೇಶ್ವರಿ ಅವರನ್ನು ಒಳಗೊಂಡ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಅರ್ಜಿಗೆ ಸಂಬಂಧಿಸಿ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ. ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಸಂಸ್ಥೆಗೆ ಹೆಚ್ಚಿನ ಹೊಣೆಗಾರಿಕೆಯನ್ನು ಹೊರಿಸುವುದು ಅಗತ್ಯವಿಲ್ಲ. ಪ್ರಕರಣವನ್ನು ಮರು ಆರಂಭಿಸುವುದು ಮತ್ತಷ್ಟು ಜಟಿಲತೆಗೆ ಕಾರಣವಾಗುವುದಲ್ಲದೆ, ಅರ್ಹ ಸಂತ್ರಸ್ತರಿಗೆ ತೊಂದರೆಯುಂಟು ಮಾಡಲಿದೆ ಎಂದಿದೆ.
ವಂಚನೆ ನಡೆದರೆ ಮಾತ್ರ ಪರಿಹಾರವನ್ನು ನೀಡುವುದರ ಬಗ್ಗೆ ಯೋಚಿಸಬಹುದು. ಆದರೆ ಕೇಂದ್ರವು ಈ ವಿಷಯದಲ್ಲಿ ವಾದಿಸಿಲ್ಲ. 2 ದಶಕಗಳ ನಂತರವೂ ಈ ವಿಷಯವನ್ನು ಪ್ರಸ್ತಾಪಿಸಲು ಕೇಂದ್ರವು ಯಾವುದೇ ತರ್ಕವನ್ನು ಒದಗಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೆಚ್ಚಿನ ಪರಿಹಾರದ ಹೊಣೆಗಾರಿಯನ್ನು ಯುಸಿಸಿ ಮೇಲೆ ವಿಧಿಸುವ ಅಗತ್ಯ ಕಾಣುತ್ತಿಲ್ಲ. ಸಂತ್ರಸ್ತರಿಗೆ ಪ್ರಮಾಣಾನುಗುಣವಾಗಿ ಇದಾಗಲೇ 6 ಬಾರಿ ಪರಿಹಾರವನ್ನು ವಿತರಿಸಲಾಗಿದೆ. ಭೋಪಾಲ್ ಅನಿಲ ದುರಂತ ಸಂತ್ರಸ್ತರ ಅಗತ್ಯವನ್ನು ಪೂರೈಸಲು ಆರ್ಬಿಐ ಬಳಿ ಇದಾಗಲೇ 50 ಕೋಟಿ ರೂ.ವನ್ನು ಇರಿಸಲಾಗಿದೆ. ಕೇಂದ್ರ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್ಗಳನ್ನು ಪೂರೈಸಲು ಬಳಸಿಕೊಳ್ಳಬೇಕು. ಒಂದೊಮ್ಮೆ ಪ್ರಕರಣವನ್ನು ಮರು ಆರಂಭಿಸಿದರೆ ಅದು ಮತ್ತಷ್ಟು ಜಟಿಲತೆಗೆ ಸಿಲುಕಬಹುದು. ಯುಸಿಸಿಗೆ ಅನುಕೂಲಕರವಾಗಿ ಪರಿಣಮಿಸಲಿದೆ. ಇದರಿಂದ ಸಂತ್ರಸ್ತರಿಗೆ ತೊಡಕಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಸಿ ಆಗಿನ ಯೂನಿಯನ್ ಕಾರ್ಬೈಡ್ ಅಧ್ಯಕ್ಷ ವಾರೆನ್ ಆಂಡರ್ಸನ್ ಪ್ರಮುಖ ಆರೋಪಿಯಾಗಿದ್ದ. ಆದರೆ ವಿಚಾರಣೆಗೆ ಹಾಜರಾಗಲಿಲ್ಲ. 1992ರಲ್ಲಿ ಭೋಪಾಲ್ ನ್ಯಾಯಾಲಯವು ಆತನನ್ನು ಪರಾರಿ ಎಂದು ಘೋಷಿಸಿತ್ತು.
2014ರಲ್ಲಿ ಆಂಡರ್ಸನ್ ಸಾಯುವ ಮೊದಲು ಎರಡು ಜಾಮೀನು ರಹಿತ ವಾರಂಟ್ಗಳನ್ನು ಹೊರಡಿಸಲಾಗಿತ್ತು. 2010ರ ಜೂನ್ 7ರಂದು, ಭೋಪಾಲ್ ನ್ಯಾಯಾಲಯವು ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ 7 ಅಧಿಕಾರಿಗಳಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.