ಚೆನ್ನೈ: ಬಿಸಿ ಟೀ (Tea) ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ಸೊಸೆ ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಕೊಲೆಯಾದವರನ್ನು ವಿರಾಲಿಮಲೈ ಮೂಲದ ಪಳನಿಯಮ್ಮಾಳ್ ಎಂದು ಗುರುತಿಸಲಾಗಿದೆ. ಇವರು ತಮಿಳುನಾಡಿನ ಪುದುಕೋಟೆ (Pudukote Tamilnadu) ಜಿಲ್ಲೆಯವರು. ಇವರನ್ನು ಸೊಸೆ ಕನಕು ಕೊಲೆ ಮಾಡಿದ್ದಾಳೆ.
ನಡೆದಿದ್ದೇನು..?: ಪಳನಿಯಮ್ಮಾಳ್ಗೆ ಟೀ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸುತ್ತಿದ್ದಳು. ಹಿಂದಿನ ದಿನವೂ ಇದೇ ರೀತಿಯಲ್ಲಿ ಪಳನಿಯಮ್ಮಾಳ್ ತನ್ನ ಸೊಸೆಯನ್ನು ಟೀ ತರಲು ಕಳುಹಿಸಿದ್ದರು. ಆದರೆ ಅಂದು ಅತ್ತೆ ಪಳನಿಯಮ್ಮಾಳ್ ಬಿಸಿ ಟೀ ತಂದಿಲ್ಲ ಎಂದು ಗದರಿಸಿದ್ದಾಳೆ. ಇದರಿಂದ ಕೋಪಗೊಂಡ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ. ಇದರಿಂದ ಪಳನಿಯಮ್ಮಾಳ್ ತೀವ್ರ ರಕ್ತಸ್ರಾವದಿಂದಾಗಿ ಮೂರ್ಛೆ ಹೋಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಪಳನಿಯಮ್ಮಾಳ್ಳನ್ನು ನೆರೆಹೊರೆಯವರು ಸೇರಿ ಸ್ಥಳೀಯ ವಿರಾಲಿಮಲೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಲ್ಲಿ ಚಿಕಿತ್ಸೆ ಫಲಿಸಿದ ಪರಿಣಾಮ ಸಂಬಂಧಿಕರು ಪಳನಿಮ್ಮಾಳ್ ಅವರನ್ನು ತಿರುಚ್ಚಿ ಆಸ್ಪತ್ರೆಗೆ ದಾಖಲಿದ್ದಾರೆ. ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಅಸ್ವಸ್ಥ ಸೊಸೆ: ಮಾನಸಿಕ ಅಸ್ವಸ್ಥೆಯಾಗಿರುವ ಕನಕುಗೆ ಪ್ರತಿನಿತ್ಯ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಆಕೆ ಮಾತ್ರೆ ತೆಗದುಕೊಂಡಿರಲಿಲ್ಲ. ಹೀಗಾಗಿ ಅತ್ತೆ ಗದರಿದ್ದಕ್ಕೆ ಸಿಟ್ಟು ಬಂದು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾಳೆ. ಘಟನೆ ಬಳಿಕ ಕನಕು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.