ಗಂಗಾವತಿ ಕೇಂದ್ರಿಯ ಬಸ್ ನಿಲ್ದಾಣದ ಎದುರಿಗಿರುವ ಉದ್ಯಾನದಲ್ಲಿ ದಂಪತಿ ನಡುವಿನ ವೈಮನಸ್ಸು ಘೋರ ದುರಂತಕ್ಕೆ ಎಡೆ ಮಾಡಿಕೊಟ್ಟಿದೆ. ನಶೆಯಲ್ಲಿದ್ದ ಕಿರಾತಕರ ಗುಂಪೊಂದು ಪತಿಯನ್ನು ಥಳಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜರುಗಿದೆ.
ಶ್ರೀಕೃಷ್ಣದೇವರಾಯ ವೃತ್ತದಲ್ಲಿರುವ ಕೇಂದ್ರ ಬಸ್ ನಿಲ್ದಾಣದಲ್ಲಿ ಗಲಾಟೆಯಾಗಿದ್ದು, ಬಳಿಕ ಮಹಿಳೆ ರಕ್ಷಣೆಗಾಗಿ ಸಮೀಪದ ನೆಹರೂ ಪಾರ್ಕ್ ಕಡೆಗೆ ಓಡಿ ಹೋಗಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಮೇಲೆ ಎರಗಿದ ಕಿರಾತಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಪೈಕಿ ಲಿಂಗರಾಜ ಎಂಬ ಯುವಕ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಿಕ್ಕ ಆರೋಪಿಗಳನ್ನು ಮೌಲಹುಸೇನ್, ಶಿವಕುಮಾರಸ್ವಾಮಿ, ಪ್ರಶಾಂತ, ಮಹೇಶ ಮತ್ತು ಮಾದೇಶ ಎಂದು ಗುರುತಿಸಲಾಗಿದೆ
ಇನ್ನೂ ಬೆಂಗಳೂರಿನ ಗೊರಗುಂಟೆಪಾಳ್ಯದ 21 ವರ್ಷ ವಯಸ್ಸಿನ ಯುವತಿ, ಗಂಗಾವತಿ ತಾಲ್ಲೂಕಿನ ಸಿದ್ಧಾಪುರದ ಯುವಕನನ್ನು ಪ್ರೀತಿಸಿ ಮೂರು ತಿಂಗಳ ಹಿಂದೆಯಷ್ಟೇ ಹುಲಿಗಿ ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಈ ಮಧ್ಯೆ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿದ್ದು, ಪತಿ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದಾನೆ. ಪತಿಯನ್ನು ಹುಡುಕಿಕೊಂಡು ಪತ್ನಿ ಶುಕ್ರವಾರ ತಡರಾತ್ರಿ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ. ಇತ್ತ ಪತಿಯೂ ಪತ್ನಿಗಾಗಿ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಪತಿ-ಪತ್ನಿಯರು ಪರಸ್ಪರ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ತನ್ನ ಪತಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇದನ್ನು ಗಮನಿಸಿದ ಆರು ಜನರ ತಂಡವೊಂದು ಅಲ್ಲಿಗೆ ಆಗಮಿಸಿದೆ. ಮಹಿಳೆಯನ್ನ ಯುವಕ ಚುಡಾಯಿಸುತ್ತಿದ್ದಾನೆ ಎಂದು ಭಾವಿಸಿ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ.