ನವದೆಹಲಿ: 200 ಕೋಟಿ ರೂಪಾಯಿ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ವಂಚಕ ಸುಕೇಶ್ ಚಂದ್ರಶೇಖರ್ ಅವರ ನ್ಯಾಯಾಂಗ ಬಂಧನವನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ. ಇಂದು ಮುಂಜಾನೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಸ್ಟಡಿಯನ್ನು ವಿಸ್ತರಿಸಲಾಗಿದೆ.
ಈಮಧ್ಯೆ, ನ್ಯಾಯಾಧೀಶರು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸುಕೇಶ್ ಚಂದ್ರಶೇಖರ್ ಅವರು ಪ್ರಕರಣವನ್ನು ಬೇರೆ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಮನವಿ ಮಾಡಿದರು. ಆದರೆ, ನ್ಯಾಯಾಲಯವು ಅವರ ಮನವಿಯನ್ನು ಆಲಿಸಲು ನಿರಾಕರಿಸಿತು ಮತ್ತು ಅರ್ಜಿಯ ಸಲ್ಲಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ‘ಆರೋಪಿಗೆ ನ್ಯಾಯಮೂರ್ತಿಗಳ ಬಗ್ಗೆ ಪ್ರತಿಕ್ರಿಯಿಸುವ ಹಕ್ಕು ಇಲ್ಲ’ ಎಂದು ನ್ಯಾಯಾಲಯ ವಾದಿಸಿದೆ.
ಇದಕ್ಕೂ ಮೊದಲು ಫೆಬ್ರುವರಿ 24 ರಂದು, ದೆಹಲಿ ನ್ಯಾಯಾಲಯವು ಸುಕೇಶ್ ಚಂದ್ರಶೇಖರ್‌ರನ್ನು ಮೂರು ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿತ್ತು. ಇತ್ತೀಚೆಗೆ ಮತ್ತೊಂದು ಸುಲಿಗೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿ ಜಪ್ನಾ ಸಿಂಗ್ ಅವರಿಗೆ 3.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಇ.ಡಿ ದಾಖಲಿಸಿದ ಜಾರಿ ಪ್ರಕರಣದ ಮಾಹಿತಿ ವರದಿಯಲ್ಲಿ (ಇಸಿಐಆರ್) ಅವರನ್ನು ಬಂಧಿಸಲಾಗಿದೆ.