ನವದೆಹಲಿ: ಬಿಜೆಪಿ (BJP) ಶಾಸಕ ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಅವರಿಗೆ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಲೋಕಾಯುಕ್ತ ಅರ್ಜಿ ಸಲ್ಲಿಸಿದೆ. ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಎರಡು ಬಾರಿ ವಕೀಲರು ಮಂಗಳವಾರ ಮನವಿ ಮಾಡಿದರು.
ಲೋಕಾಯುಕ್ತ (Lokayukta) ಪರ ವಕೀಲರು ಮೊದಲು ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಸಾಂವಿಧಾನಿಕ ಪೀಠದಲ್ಲಿ ಭಾಗಿಯಾಗುತ್ತಿದ್ದು ತುರ್ತು ವಿಚಾರಣೆ ಸಾಧ್ಯವಿಲ್ಲ, ಕಲಾಪ ಅಂತ್ಯದ ವೇಳೆ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. ಒಂದು ವೇಳೆ ತುರ್ತು ವಿಚಾರಣೆಯ ಅಗತ್ಯವಿದ್ದಲ್ಲಿ ನ್ಯಾ. ಸಂಜಯ್ ಕಿಶನ್ ಕೌಲ್ ಪೀಠದಲ್ಲಿ ಪ್ರಸ್ತಾಪಿಸಲು ಸೂಚನೆ ನೀಡಿದರು.
ಸಿಜೆಐ ಸೂಚನೆ ಮೇರೆಗೆ ನ್ಯಾ. ಸಂಜಯ್ ಕಿಶನ್ ಕೌಲ್ ಪೀಠದ ಮುಂದೆ ಲೋಕಾಯುಕ್ತ ಪರ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದರು. ಆದರೆ ನ್ಯಾ. ಕೌಲ್ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದರು. ಅರ್ಜಿಯಲ್ಲಿ ತುರ್ತು ವಿಚಾರಣೆ ಮಾಡುವಂತದ್ದು ಏನಿದೆ? ಮಧ್ಯಂತರ ಜಾಮೀನು ರದ್ದುಗೊಳಿಸಬೇಕಾ? ಹೈಕೋರ್ಟ್ ತನ್ನ ವಿವೇಚನೆಯಲ್ಲಿ ಜಾಮೀನು ನೀಡಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಆರೋಪಿ ಹಾಲಿ ಶಾಸಕರಾಗಿದ್ದು, ಅಪಾರ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.
ವಾದ ಆಲಿಸಿದ ಬಳಿಕ ಪ್ರಕರಣವನ್ನು ಸಾಧ್ಯವಾದಷ್ಟು ಬೇಗ ವಿಚಾರಣೆ ಪಟ್ಟಿ ಮಾಡಲು ಸೂಚನೆ ನೀಡಿದರು. ಇದಾದ ಬಳಿಕವೂ ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದ ವಕೀಲರಿಗೆ ತರಾಟೆಗೆ ತೆಗೆದುಕೊಂಡ ನ್ಯಾ.ಕೌಲ್ ಹಿಂದಿನ ಆದೇಶವನ್ನು ವಾಪಸ್ ಪಡೆಯವುದಾಗಿ ಎಚ್ಚರಿಸಿದರು.