ನವದೆಹಲಿ: ಈ ಬಾರಿ ಭಾರತದ ಎರಡು ಚಿತ್ರಗಳಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ. ಈ ಹಿನ್ನೆಲೆಯಲ್ಲಿ ಪ್ರಶಸ್ತಿ ವಿಜೇತರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಬಾರಿಯ ಅಕಾಡೆಮಿ ಅವಾರ್ಡ್ಸ್ ನಲ್ಲಿ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡು ಅತ್ಯುತ್ತಮ ಓರಿಜನ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದರೆ, ಡಾಕ್ಯುಮೆಂಟರಿ ವಿಭಾಗದಲ್ಲಿ ಕಾರ್ತಿಕಿ ನಿರ್ದೇಶನದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಎರಡೂ ತಂಡಕ್ಕೂ ಪ್ರಧಾನಿ ಮೋದಿಯವರು ಶುಭಾಶಯಗಳನ್ನು ಕೋರಿದ್ದಾರೆ. ಇದೊಂದು ಐತಿಹಾಸಿ ಕ್ಷಣ ಎಂದು ಬಣ್ಣಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಅಸಾಧಾರಣ! ‘ನಾಟು ನಾಟು’ ಜನಪ್ರಿಯತೆ ಜಾಗತಿಕವಾಗಿದೆ. ಇದು ಮುಂದಿನ ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಹಾಡಾಗಲಿದೆ. ಪ್ರತಿಷ್ಠಿತ ಗೌರವ ಪಡೆದ ಎಂ ಎಂ ಕೀರವಾಣಿ ಹಾಗೂ ಚಿತ್ರದ ಇಡೀ ತಂಡಕ್ಕೆ ಅಭಿನಂದನೆಗಳು. ಭಾರತ ಉತ್ಸುಕವಾಗಿದ್ದು ಮತ್ತು ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ. ‘ದಿ ಎಲಿಫೆಂಟ್ ವಿಸ್ಪರರ್ಸ್’ ತಂಡಕ್ಕೆ ಅಭಿನಂದನೆಗಳು. ತಂಡ ಸಾಕ್ಷ್ಯಚಿತ್ರವು ಸುಸ್ಥಿರ ಅಭಿವೃದ್ಧಿ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಪ್ರಾಮುಖ್ಯತೆಯನ್ನು ಅದ್ಭುತವಾಗಿ ಎತ್ತಿ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
